ಮಂಡ್ಯ

ಶಕ್ತಿ ಯೋಜನೆಗೆ ಕವಿಯ ಅಪಸ್ವರ

ಮಂಡ್ಯ:- ಶಕ್ತಿ ಯೋಜನೆಯ ಸಮಸ್ಯೆಗಳು ಹಾಗೂ ಸರ್ಕಾರದ ನೀತಿಯ ಬಗ್ಗೆ ಬರಹಗಾರ ಮತ್ತು ಕವಿ ರಾಜೇಂದ್ರ ಪ್ರಸಾದ್‌ ಅವರು ಬರೆದುಕೊಂಡಿದ್ದು ಇದು ಚರ್ಚೆಗೆ ಕಾರಣವಾಗಿದೆ.
ಮೇ ಸಾಹಿತ್ಯ ಮೇಳದಲ್ಲಿ ಭಾಗವಹಿಸಲೆಂದು ಇತ್ತೀಚೆಗೆ ಮಂಡ್ಯ ಬಸ್ ನಿಲ್ದಾಣ ತಲುಪಿದೆ, ಮಂಡ್ಯ ಬಸ್ ನಿಲ್ದಾಣದಲ್ಲೇ ಸುಮಾರು ಎರಡು ಗಂಟೆ ಕಾದೆ. ಆ ಅವಧಿಯೊಳಗೆ ಬಂದ ಹದಿನೈದಕ್ಕೂ ಹೆಚ್ಚು ಬಸ್ ಗಳನ್ನು ಹತ್ತಲು ಸಾಧ್ಯವಾಗಲೇ ಇಲ್ಲ. ಬಸ್ಸಿನೊಳಗೆ, ಹೊರಗೆ ಹೆಣ್ಣು ಮಕ್ಕಳ ಸಾಮ್ರಾಜ್ಯವೇ ತುಂಬಿತ್ತು. ಕನಿಷ್ಠ ನಿಂತು ಪ್ರಯಾಣ ಮಾಡಲು ಸಾಧ್ಯವಿರದಷ್ಟು ಸಂದಣಿ ಇತ್ತು ಎಂದು ಅವರು ಬರೆದುಕೊಂಡಿದ್ದಾರೆ.

ಎಷ್ಟು ಜನ ಖಾಲಿಯಾಗುತ್ತಾರೋ ಅದಕ್ಕಿಂತ ಒಂದು ಪಟ್ಟು ಹೆಚ್ಚೇ ಜನ ಬಸ್ ಸ್ಟ್ಯಾಂಡಿನೊಳಗೆ ಪ್ರವಾಹದಂತೆ ಬರುತ್ತಿದ್ದರು. ನೇರ ಬಸ್ಸುಗಳು ಕೂಡ ಬಹಳ ಕಡಿಮೆ ಇದ್ದುವು. ಒಂದೇ ಒಂದು ಬಂತು, ಅದನ್ನು ಹತ್ತಿ ಕಿತ್ತಾಡುವುದನ್ನ ನೋಡಿ ದೂರವೇ ಉಳಿದುಬಿಟ್ಟೆ. ಯಾವ ಬಸ್ ಬಂದರೂ ಹತ್ತಿರ ಸುಳಿಯಲು ಕೂಡ ಜಾಗವಿಲ್ಲದಂತೆ ಸ್ತ್ರೀಯರು ಆವರಿಸಿಬಿಡುತ್ತಿದ್ದರು. ಕಡೆಗೆ ಇನ್ನು ಹೊರಟರೂ ಬೆಂಗಳೂರು ತಲುಪಿ ಸಿಂಧನೂರು ಬಸ್ ಹತ್ತುವುದು ಸಾಧ್ಯವಿರಲಿಲ್ಲ. ಬಸ್ ಹತ್ತುವ ಸರ್ಕಸ್ಸಿನ ಆಯಾಸದಿಂದ ಬೇಸತ್ತು ಬ್ಯಾಗೇರಿಸಿಕೊಂಡು ಮನೆಗೆ ಮರಳಿದೆ.

ಈಚೆಗೆ ಹತ್ತಾರು ಬಾರಿ ಬಸ್ ಪ್ರಯಾಣ ಮಾಡುವಾಗ ಗಮನಿಸಿದ್ದು, ಸರ್ಕಾರವು ಶಕ್ತಿಯೋಜನೆಯನ್ನು ತಂದಿದ್ದೇನೋ ಸರಿ. ಅದಕ್ಕೆ ಮಿತಿಯಿರದೇ ಹೋದರೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತೊಂದು ಸರ್ಕಾರ ಬರುವುದರೊಳಗೆ ಹಳ್ಳ ಹಿಡಿಯುತ್ತದೆ. ದಿನವೂ ಕೆಲಸಕ್ಕಾಗಿ ಪ್ರಯಾಣ ಮಾಡುವರ ಕಥೆ ನೆನೆಸಿಕೊಂಡರೆ ದಿಗಿಲಾಗುತ್ತದೆ ಎಂದಿದ್ದಾರೆ. ಇದೇ ಮಾತನ್ನು ಹಲವರು ಹೇಳಿದ್ದಾರೆ ಕೂಡ, ಶಕ್ತಿ ಯೋಜನೆಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ.

ಸ್ತ್ರೀಯರಿಗೆ ಮೀಸಲಾದ ಸೀಟು ಸೇರಿದಂತೆ ಪುರುಷರು ಕೂರಲು ಬಿಡಿ ನಿಲ್ಲಲು ಸ್ಥಳಾವಕಾಶ ಇಲ್ಲದಿರುವುದು ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಲೇ ಇರುತ್ತೇವೆ. ಇದಕ್ಕೊಂದು ಸಾರಿಗೆ ಸಚಿವರು ಪರಿಹಾರ ದೊರಕಿಸಬೇಕಾಗಿದೆ.