ದಕ್ಷಿಣ ಕನ್ನಡ

ಶಾಸಕ ಪೂಂಜಾ ವಿರುದ್ಧ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಕೇಸ್ ದಾಖಲು

ಮಂಗಳೂರು:- ಜಿಲ್ಲೆಯ ಬೆಳ್ತಂಗಡಿ ಶಾಸಕರ ಹರೀಶ್ ಪೂಂಜಾ ವಿರುದ್ಧ ಮುಸ್ಲಿಮ್ ವಿರುದ್ಧ ದ್ವೇಷ ಭಾಷಣ ಮಾಡಿದ ಹಿನ್ನೆಲೆ ಬಿಎನ್ ಎಸ್ ಕಾಯ್ದೆ ಕಲಂ 196, 353(2) ಅಡಿ ಪ್ರಕರಣ ದಾಖಲಾಗಿದೆ.

ಶನಿವಾರದಂದು ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ತೆಕ್ಕಾರಿನ ಕಂಟ್ರಿ ಬ್ಯಾರಿಗಳು ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಹಾಕಿದ ಟ್ಯೂಬ್ ಲೈಟನ್ನು ಹೊಡೆದು ಹಾಕುತ್ತಾರೆ, ಡೀಸೆಲ್ ಕದಿಯುತ್ತಿದ್ದಾರೆ ಎಂದು ಹೇಳಿದ್ದರು. ಗ್ರಾಮದ ಮುಸ್ಲಿಮರ ವಿರುದ್ಧ ಅವಹೇಳನಕಾರಿ ಮತ್ತು ದ್ವೇಷ ಪೂರಿತವಾಗಿ ಮಾತನಾಡಿದ ಶಾಸಕರ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ದೇವಾಲಯದ ಬ್ರಹ್ಮಕಲಶೋತ್ಸವದ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಮಸೀದಿಗಳಿಗೆ ಏಕೆ ನೀಡಿದ್ದೀರಿ? ನಮಗೂ ಮುಸ್ಲಿಮರಿಗೂ ಯಾವುದೇ ಸಂಬಂಧವಿಲ್ಲ. ನೀವು ಮುಸ್ಲಿಮರಿಗೆ ಆಹ್ವಾನ ಪತ್ರಿಕೆ ನೀಡಿದ್ದರಿಂದಲೇ ಅವರು ಟ್ಯೂಬ್ ಲೈಟ್ ಹೊಡೆದು ಹಾಕಿದ್ದಾರೆ ಎಂದು ಹರೀಶ್ ಪೂಂಜಾ ಆರೋಪಿಸಿದ್ದರು.

ಬಹಳ ಸೂಕ್ಷ್ಮ ಸನ್ನಿವೇಶದಲ್ಲಿ, ಶಾಸಕ ಹರೀಶ್ ಪೂಂಜಾ ದ್ವೇಷ ಭಾಷಣ ಮಾಡುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಎಸ್.ಎಂ.ಎಸ್.ಇಬ್ರಾಹಿಂ ಮುಸ್ಲಿಯಾರ್ ಅವರು ಉಪ್ಪಿನಂಗಡಿ ಠಾಣೆಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ