ಬೆಂಗಳೂರು:- ಕನ್ನಡ ಸಿನಿಮಾಗಳು ಪರಭಾಷೆ ಸಿನಿಮಾಗಳ ವಿರುದ್ಧ ಸೋಲುತ್ತಿದ್ದು, ಇನ್ನೂ ಬೇಕಾದಷ್ಟು ಸಮಸ್ಯೆಗಳು ಚಿತ್ರರಂಗದಲ್ಲಿ ತುಂಬಿ ತುಳುಕ್ಕುತ್ತಿವೆ. ಇದೇ ಕಾರಣಕ್ಕೆ ಇದೀಗ ಚಿತ್ರರಂಗದ ಕೆಲ ಹಿರಿಯರು ಶಿವರಾಜ್ ಕುಮಾರ್ ಅವರ ಮನೆಯಲ್ಲಿ ಸಭೆ ನಡೆಸಿ ಚಿತ್ರರಂಗದ ಬಗ್ಗೆ ಚರ್ಚೆ ಮಾಡಿದ್ದಾರೆ.
ಶಿವರಾಜ್ ಕುಮಾರ್ ಅವರ ಮನೆಯಲ್ಲಿ ಇಂದು (ಮೇ 17) ಚಿತ್ರರಂಗದ ಕೆಲ ಗಣ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿ ನಟರಾದ ದುನಿಯಾ ವಿಜಯ್, ಗೋಲ್ಡನ್ ಸ್ಟಾರ್ ಗಣೇಶ್, ಧ್ರುವ ಸರ್ಜಾ ಸೇರಿದಂತೆ ಇನ್ನೂ ಕೆಲ ನಟರು ಭಾಗಿ ಆಗಿದ್ದರು. ಸಭೆಯಲ್ಲಿ ಕೆಲ ಸಿನಿಮಾ ನಿರ್ಮಾಪಕರು, ಸಿನಿಮಾ ಪ್ರದರ್ಶಕರು, ವಿತರಕರುಗಳು ಸಹ ಭಾಗಿ ಆಗಿದ್ದರು. ಎಲ್ಲರೂ ಸಹ ತಮ್ಮ ತಮ್ಮ ವಿಭಾಗಗಳಲ್ಲಿ ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದರು.
ಸಭೆಯು ಶಿವರಾಜ್ ಕುಮಾರ್ ಅವರ ನೇತೃತ್ವದಲ್ಲಿ ನಡೆದಿದ್ದು, ಕನ್ನಡ ಚಿತ್ರರಂಗ ಎದುರಿಸ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಚಿತ್ರಮಂದಿರಗಳಿಗೆ ಜನ ಬರದೇ ಇರುವುದು, ಕನ್ನಡ ಸಿನಿಮಾಗಳಿಗೆ ಥಿಯೇಟರ್ ಕೊರತೆ, ಟಿಕೆಟ್ ದರ ವಿಚಾರ, ದಿನೇ-ದಿನೆ ಕಡಿಮೆಯಾಗುತ್ತಿರುವ ಕನ್ನಡ ಸಿನಿಮಾಗಳು, ಪರಭಾಷೆ ಸಿನಿಮಾಗಳ ಹಾವಳಿ, ನಿರ್ಮಾಪಕರ ಸಂಕಷ್ಟ, ವಿತರಕರು ಮತ್ತು ಪ್ರದರ್ಶಕರ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಿಗುಸುವಂತೆ ಸದ್ಯದಲ್ಲೇ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಆಗುವ ನಿರ್ಧಾರವನ್ನು ಎಲ್ಲರೂ ಸೇರಿ ತೆಗೆದುಕೊಂಡಿದ್ದಾರೆ. ಇದೇ ತಿಂಗಳ ಕೊನೆಯ ವಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಆಗುವ ಬಗ್ಗೆ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.
ಒಂದು ಗಂಟೆಗೂ ಹೆಚ್ಚು ಕಾಲ ಸಭೆ ನಡೆದಿದೆಯಾದರೂ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಆಗುವುದಕ್ಕೆ ಮುಂಚೆ ಚಿತ್ರರಂಗದ ಎಲ್ಲ ವಿಭಾಗದ ಪ್ರಮುಖರನ್ನು ಕರೆಸಿ ಉನ್ನತ ಮಟ್ಟದ ಸಭೆಯೊಂದನ್ನು ಮಾಡುವ ಬಗ್ಗೆಯೂ ಸಹ ಸಭೆಯಲ್ಲಿ ತೀರ್ಮಾನಿಸಲಾಗಿದೆ.