ಬೆಂಗಳೂರು:- ರಾಜ್ಯ ಸರ್ಕಾರವು ಕಾವೇರಿ ಆರತಿಯನ್ನು ಸಾಂಸ್ಕೃತಿಕವಾಗಿ ಮತ್ತು ಸಾಹಿತ್ಯಾತ್ಮಕವಾಗಿ ಶ್ರೀಮಂತಗೊಳಿಸುವ ಉದ್ದೇಶವನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಜಾನಪದ ಸೊಬಗು, ಧಾರ್ಮಿಕತೆಯ ಮೆರಗು ಹಾಗೂ ಭಕ್ತಿ ಭಾವದಿಂದ ಕೂಡಿರುವ ಗೀತೆಯನ್ನು ರಚಿಸುವ ಅಗತ್ಯವಿದೆ ಎಂದು ಡಿಸಿಎಂ ಶಿವಕುಮಾರ್ ಅವರು ಖ್ಯಾತ ಸಂಗೀತ ನಿರ್ದೇಶಕರಾದ ಹಂಸಲೇಖ, ಸಾಧು ಕೋಕಿಲ ಹಾಗೂ ಅರ್ಜುನ್ ಜನ್ಯ ಅವರಿಗೆ ಪತ್ರ ಬರೆದಿದ್ದಾರೆ.
ಬದಲಾದ ಕಾಲಘಟ್ಟಕ್ಕೆ ಹೊಂದಿಕೊಳ್ಳುವಂತೆ, ವರ್ಣರಂಜಿತವಾಗಿ ಮೂಡಿಬರಲಿರುವ ಈ ಗೀತೆಯು ಕಾವೇರಿ ಮಾತೆಯ ಸಂಪೂರ್ಣ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತಿರಬೇಕು. ಕಾವೇರಿ ಮಾತೆಯ ಪರಂಪರೆಯನ್ನು ಉಳಿಸುವುದರ ಜೊತೆಗೆ, ಜಲ ಶ್ರೀಮಂತಿಕೆ ಸಹಿತ ಕಾವೇರಿ ವೈಭವವನ್ನು ದೇಶ ವಿದೇಶಗಳಿಗೆ ಹಾಡು ಮತ್ತು ಸಂಗೀತದ ಮೂಲಕ ಸಾರುವ ಹಾಗೂ ಆರತಿಯ ಮಹಿಮೆಯನ್ನು ಮೇಳೈಸುವ ಅದ್ಭುತವಾದ ಸಾಹಿತ್ಯ ಮತ್ತು ಗೀತ ಸಂಯೋಜನೆ ಆಗಬೇಕಿದೆ ಎಂದು ಡಿಸಿಎಂ ಶಿವಕುಮಾರ್ ಹೇಳಿದ್ದಾರೆ.
ರಚನೆಯಾದ ಈ ಗೀತೆಯನ್ನು ಧ್ವನಿ ಸುರಳಿ ರೂಪದಲ್ಲಿ ತಂದು, ಕಾವೇರಿ ಆರತಿ ಸಂದರ್ಭದಲ್ಲಿ ಬರುವ ಭಕ್ತಾದಿಗಳಿಗೆ ಕಣ್ಣು ತುಂಬಿಕೊಳ್ಳುವಂತೆ ಮಾಡುವುದು ಇದರ ಪ್ರಮುಖ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ, ಕಾವೇರಿಯ ಮೆರುಗನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾವೇರಿ ಮಾತೆ ಹಾಗೂ ಕಾವೇರಿ ಆರತಿಗೆ ಸಂಬಂಧಿಸಿದಂತೆ ಗೀತ ರಚನೆ ಮಾಡುವಂತೆಯೂ, ಆಯ್ಕೆಯಾದ ಗೀತೆಯನ್ನು ಕಾವೇರಿ ಆರತಿ ಸಂದರ್ಭದಲ್ಲಿ ಪ್ರಸಾರ ಮಾಡಲಾಗುವುದು ಎಂದು ಡಿಕೆಶಿ ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಈ ಮೂಲಕ ಕಾವೇರಿ ನದಿಯ ಮಹತ್ವವನ್ನು ಸಾಂಸ್ಕೃತಿಕವಾಗಿ ಎತ್ತಿ ಹಿಡಿಯುವ ಮತ್ತು ಭಕ್ತಾದಿಗಳಲ್ಲಿ ಭಕ್ತಿ ಭಾವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.