ಉಡುಪಿ

ಸಂತಾಪ ಸಭೆಯಲ್ಲಿ ಎಂ.ಎ.ಗಫೂರ್ ಉಡುಪಿ

ಉಡುಪಿ:- ಕಾಶ್ಮೀರಕ್ಕೆ ತೆರಳಿ ಸಂತ್ರಸ್ತರಿಗೆ ಧೈರ್ಯ ತುಂಬುತ್ತಾರೆ, ದೇಶದ ಜನತೆಯ ಪರ ನಿಲ್ಲುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಆದರೆ, ಮೋದಿಯವರು ದಾಳಿಗೆ ಉತ್ತರ ಕೊಡುವ ಬದಲು ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದು, ಸಂತ್ರಸ್ತರಿಗೆ ಸಂತೈಸುವ ಎಳ್ಳಷ್ಟು ಕೆಲಸ ಮಾಡದಿರುವುದು ದೇಶದ್ರೋಹದ ಕಾರ್ಯ ಎಂದು ಎಂ.ಎ ಗಫೂರ್ ತಿಳಿಸಿದರು.

ಅವರು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಉಡುಪಿ ಜಿಲ್ಲೆಯ ಕುಂದಾಪುರದ ಕೋಟ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಸಾಲಿಗ್ರಾಮ ಬಸ್ಸು ನಿಲ್ದಾಣದಲ್ಲಿ ಎ.25ರ ಶುಕ್ರವಾರ ನಡೆದ ಪ್ರತಿಭಟನೆ ಹಾಗೂ ಉಗ್ರರ ದಾಳಿನಲ್ಲಿ ಮೃತಪಟ್ಟ ವ್ಯಕ್ತಿಗಳಿಗೆ ಸಂತಾಪ ಸಭೆಯಲ್ಲಿ ಮಾತನಾಡಿದರು.

ಕರ್ನಾಟಕ ರಾಜ್ಯ ಸರಕಾರ ಕಾಶ್ಮೀರದಲ್ಲಿರುವ ಪ್ರವಾಸಿಗರನ್ನು ರಾಜ್ಯಕ್ಕೆ ಕರೆತರಲು ವಿಶೇಷ ವಿಮಾನ ವ್ಯವಸ್ಥೆ ಮಾಡಿದೆ. ಘಟನೆಯಲ್ಲಿ ಸತ್ತವರಿಗೆ ಪರಿಹಾರ ಘೋಷಿಸಿದೆ. ನಮ್ಮ ನಾಯಕರು ಸಂತ್ರಸ್ತರ ನೇರ ಸಂಪರ್ಕದಲ್ಲಿದ್ದಾರೆ. ಆದರೆ, ಕೇಂದ್ರ ಸರಕಾರ ಒಂದೇ ಒಂದು ಪರಿಹಾರ ಕ್ರಮಗಳನ್ನು ಕೈಗೊಂಡಿಲ್ಲ ಎಂದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶಂಕರ್‌ ಕುಂದರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಘಟನೆಯನ್ನು ನಿಯಂತ್ರಿಸಲಾಗದ ಕೇಂದ್ರ ಸರಕಾರ ನೈತಿಕ ಹೊಣೆಹೊತ್ತು ಆಡಳಿತದಿಂದ ಕೆಳಗಿಳಿಯಬೇಕು. ಪ್ರಧಾನಿಗಳು ರಾಜೀನಾಮೆ ಸಲ್ಲಿಸಬೇಕು ಎಂದರು.

ಉಡುಪಿ ಜಿಲ್ಲಾ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಕಿಶನ್‌ ಹೆಗ್ಡೆ ಕೊಲ್ಕೆಬೈಲು, ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಮುಖಂಡರಾದ ದಿನೇಶ್‌ ಹೆಗ್ಡೆ ಮೊಳಹಳ್ಳಿ, ಯುವ ಕಾಂಗ್ರೆಸ್‌ ಅಧ್ಯಕ್ಷ ಇಚ್ಚಿತರ್ಥ ಶೆಟ್ಟಿ, ಪಕ್ಷದ ಪ್ರಮುಖರಾದ ರೋಷನಿ ಒಲೆವೆರಾ, ತಿಮ್ಮ ಪೂಜಾರಿ ಗಿಳಿಯಾರ್‌, ಕಿಶೋರ್‌ ಶೆಟ್ಟಿ ಮೈರ್‌ ಕೊಮೆ, ನಾಗೇಂದ್ರ ಪುತ್ರನ್‌ ಕೋಟ, ಬಾಲಕೃಷ್ಣ ಪೂಜಾರಿ ಸಾಸ್ತಾನ, ಕೋಟ ಬ್ಲಾಕ್‌ ಕಾಂಗ್ರೆಸ್‌ ಮಹಿಳಾ ಕಾಂಗ್ರೆಸ್‌ ಅಧ್ಯರಾದ ರೇಖಾ ಪಿ. ಸುವರ್ಣ, ಪ.ಪಂ. ಸದಸ್ಯ ರವೀಂದ್ರ ಕಾಮತ್‌ ಗುಂಡ್ಮಿ ಉಪಸ್ಥಿತರಿದ್ದರು.