ದಕ್ಷಿಣ ಕನ್ನಡ

ಸತ್ಯಾಸತ್ಯತೆ, ನೈಜತೆಯ ವರದಿ ಪಡೆಯಲು ಕಾಂಗ್ರೆಸ್ ಪಕ್ಷದಿಂದ ನಿಯೋಗ ಕಳುಹಿಸಲು ನಿರ್ಧಾರ

ಮಂಗಳೂರು:- ದಕ್ಷಿಣ ಕನ್ನಡ, ಉಡುಪಿ, ಶಿವರಾಮ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇತ್ತೀಚೆಗೆ ನಡೆದ ಕೆಲವು ಅಹಿತಕರ ಘಟನೆಗಳ ಸತ್ಯಾಸತ್ಯತೆ ಮತ್ತು ನೈಜತೆಯ ವರದಿ ಪಡೆಯಲು ಪಕ್ಷದಿಂದ ನಿಯೋಗ ಕಳುಹಿಸಲು ಕೆಪಿಸಿಸಿ ನಿರ್ಧರಿಸಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಜ್ಯಸಭಾ ಸದಸ್ಯರಾದ ಸೈಯದ್ ನಾಸೀರ್ ಹುಸೇನ್, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಶಾಸಕ ಎನ್.ಎ.ಹ್ಯಾರಿಸ್, ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್, ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್.ಸುದರ್ಶನ್, ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಮತ್ತು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಈ ನಿಯೋಗದಲ್ಲಿದ್ದಾರೆ.

ಕರಾವಳಿ ಜಿಲ್ಲೆಗಳಲ್ಲಿ ನಡೆದ ಪ್ರಕರಣಗಳು ಮಾಧ್ಯಮಗಳಲ್ಲಿ ಕೊಲೆ, ಸುಲಿಗೆ, ಕೋಮುಗಲಭೆ ಎಂಬ ವ್ಯಾಖ್ಯಾನಗಳಿಂದ ವ್ಯಾಪಕವಾಗಿ ಪ್ರಚಾರವಾಗುತ್ತಿದೆ. ಈ ಕಾರಣಕ್ಕೆ ಈ ಜಿಲ್ಲೆಗಳಿಗೆ ಭೇಟಿ ನೀಡಿ, ಸ್ಥಳೀಯ ಮುಖಂಡರ ಸಹಕಾರದೊಂದಿಗೆ ಘಟನೆ ನಡೆದ ಪ್ರದೇಶಗಳಲ್ಲಿ ಸಂಬಂಧಪಟ್ಟ ಸಂತ್ರಸ್ತ ಕುಟುಂಬಗಳು, ಎಲ್ಲ ವರ್ಗಗಳ ಜನರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಇತರರೊಂದಿಗೆ ಚರ್ಚಿಸಿ ಈ ಎಲ್ಲಾ ಪ್ರಕರಣಗಳ ಬಗ್ಗೆ, ಕೂಲಂಕಷವಾಗಿ ಪರಾಮರ್ಶಿಸಿ ಒಂದು ವಾರದ ಒಳಗೆ ಸಮಗ್ರ ವರದಿ ನೀಡಲು ಈ ಸಮಿತಿ ರಚಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಮೊನ್ನೆ ಮೊನ್ನೆ ಅಬ್ದುಲ್ ರಹಮಾನ್ ಹತ್ಯೆಯಾದ ನಂತರ ಅಲ್ಪಸಂಖ್ಯಾತ ವರ್ಗದವರಿಗೆ ರಕ್ಷಣೆ ಇಲ್ಲ, ಪೊಲೀಸ್ ಅಧಿಕಾರಿ ವರ್ಗದವರಿಂದ ನ್ಯಾಯ ದೊರಕದಿರುವುದರಿಂದ ಕಾಂಗ್ರೆಸ್ ಪಕ್ಷದ ಮುಖಂಡರುಗಳ ರಾಜೀನಾಮೆಯ ಪರ್ವ ಶುರುವಾಗಿತ್ತು, ಜೊತೆಗೆ ಮಂಗಳೂರು ಖೊತಖೊತ ಕುಸಿಯುತ್ತಿರುವ ಹಿನ್ನೆಲೆ ಸಿದ್ದರಾಮಯ್ಯ ಸ್ವತಃ ಬಿ.ಕೆ.ಹರಿಪ್ರಸಾದ್ ರವರನ್ನು ಸದಾಶಿವ ನಗರದ ಅವರ ಮನೆಗೆ ಭೇಟಿ ಮಾಡಿ ಮಂಗಳೂರು ಕೋಮು ಗಲಭೆಯ ಬಗ್ಗೆ ಸುಧೀರ್ಘ ಚರ್ಚೆ ನಡೆಸಿದ್ದರು.