ಮಂಗಳೂರು:- ಜಿಲ್ಲೆಯ ಉಳ್ಳಾಲ ಸೈಯದ್ ಮದನಿ ದರ್ಗಾದ 22ನೆ ಪಂಚವಾರ್ಷಿಕ ಉರೂಸ್ ಪ್ರಯುಕ್ತ ದರ್ಗಾ ವಠಾರದಲ್ಲಿ ಶುಕ್ರವಾರ ನಡೆದ ಸಾಮಾಜಿಕ ಭಾವೈಕ್ಯತಾ ಸಮಾವೇಶ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.
ಅವರು ಮಾತನಾಡಿ, ಸುಮಾರು 7 ಕೋಟಿ ಜನಸಂಖ್ಯೆ ಇರುವ ಕರ್ನಾಟಕದಲ್ಲಿ ನಾನಾ ಜಾತಿ, ಧರ್ಮ, ಭಾಷೆ, ಸಂಸ್ಕೃತಿಯ ಜನರಿದ್ದಾರೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವುದು ನಮ್ಮ ಸರಕಾರದ ಜವಾಬ್ದಾರಿಯಾಗಿದೆ. ಸಂವಿಧಾನ ಬದ್ಧವಾಗಿ ಅಧಿಕಾರ ವಹಿಸಿಕೊಂಡ ನಾವು ಅದರಂತೆ ಆಡಳಿತ ನಡೆಸುತ್ತಿದ್ದೇವೆ. ಮನುಷ್ಯರನ್ನು ದ್ವೇಷಿಸದೆ ಪ್ರೀತಿಸುತ್ತಿದ್ದೇವೆ, ಸಾಮಾಜಿಕ ನ್ಯಾಯ ಕೊಡುತ್ತಿದ್ದೇವೆ. ಸಮಾಜದಲ್ಲಿ ಶಾಂತಿ, ಸೌಹಾರ್ದದ ವಾತಾವರಣ ಸೃಷ್ಟಿಸುತ್ತಿದ್ದೇವೆ. ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುತ್ತಿದ್ದೇವೆ. ಆದರೆ, ಇದನ್ನು ಮತೀಯ ಶಕ್ತಿಗಳಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಸಮಾಜದಲ್ಲಿ ಅಶಾಂತಿಗೆ ಪ್ರಯತ್ನಿಸುತ್ತಿದೆ. ಇಂತಹ ಯಾವುದೇ ಷಡ್ಯಂತ್ರಗಳಿಗೆ ಸರಕಾರ ಹೆದರುವುದಿಲ್ಲ. ಈಗಾಗಲೇ ಜನರಿಗೆ ನೀಡುತ್ತಿರುವ ಗ್ಯಾರಂಟಿ ಯೋಜನೆಗಳಿಂದಲೂ ನಾವು ವಿಮುಖರಾಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಈ ಹಿಂದೆ 5 ವರ್ಷ ಉತ್ತಮ ಆಡಳಿತ ನೀಡಿದ ಕಾರಣದಿಂದಲೇ ಇದೀಗ ಎರಡನೇ ಬಾರಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ ಎಂದು ಕೊಂಡಾಡಿದ ಎ.ಪಿ. ಉಸ್ತಾದ್ ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪರ ಸೇವೆ ನೀಡಲಿ ಎಂದು ಆಶಿಸಿದ ಸಭೆಯ ಅಧ್ಯಕ್ಷತೆ ವಹಿಸಿದ್ದ ಉಳ್ಳಾಲ ಖಾಝಿ, ಇಂಡಿಯನ್ ಗ್ರ್ಯಾಂಡ್ ಮುಫ್ತಿ, ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಉಳ್ಳಾಲವು ಕೇವಲ ಧಾರ್ಮಿಕ ಕೇಂದ್ರವಲ್ಲ. ಮತ ಸೌಹಾರ್ದದ ಕೇಂದ್ರವಾಗಿದೆ. ಹಾಗಾಗಿಯೇ ಇಲ್ಲಿ ದಿನನಿತ್ಯ ಎಲ್ಲಾ ಸಮುದಾಯದ ಜನರು ಪ್ರಾರ್ಥನೆ ಸಲ್ಲಿಸಲು ಆಗಮಿಸುತ್ತಿದ್ದಾರೆ. ಅದನ್ನು ಗಮನಿಸಿ ಸರಕಾರವು ಉರೂಸ್‌ಗೆ ವಿಶೇಷ ಅನುದಾನ ಬಿಡುಗಡೆ ಮಾಡಿದೆ. ಅದಲ್ಲದೆ ಕ್ಷೇತ್ರದ ಅಭಿವೃದ್ಧಿಗೆ 1 ಸಾವಿರ ಕೋ.ರೂಪಾಯಿ ಅನುದಾನ ನೀಡಿದೆ. ಅದಕ್ಕಾಗಿ ತಾನು ಮುಖ್ಯಮಂತ್ರಿ ಮತ್ತು ಸಚಿವರನ್ನು ಅಭಿನಂದಿಸುತ್ತೇನೆ ಎಂದರು.
ವೇದಿಕೆಯಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಚಿವರುಗಳಾದ ರಹೀಂ ಖಾನ್, ಬೈರತಿ ಸುರೇಶ್, ಕೃಷ್ಣಭೈರೇಗೌಡ, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕರಾದ ಅಶೋಕ್ ರೈ ಪುತ್ತೂರು, ಐವನ್ ಡಿಸೋಜ, ಎ.ಕೆ.ಎಂ. ಅಶ್ರಫ್, ಮಾಜಿ ಕೇಂದ್ರ ಸಚಿವರಾದ ಸಿ.ಎಂ. ಇಬ್ರಾಹಿಂ, ಮಾಜಿ ಸಚಿವ ರಮಾನಾಥ ರೈ, ಮಾಜಿ ಸಂಸದ ವಿನಯ ಕುಮಾರ್ ಸೊರಕೆ, ಯೆನೆಪೋಯ ವಿವಿಯ ಕುಲಾಧಿಪತಿ ಡಾ.ವೈ ಅಬ್ದುಲ್ಲಾ ಕುಂಞಿ, ಉಳ್ಳಾಲ ದರ್ಗಾದ ಮಾಜಿ ಅಧ್ಯಕ್ಷ ಡಾ. ಕಣಚೂರು ಮೋನು, ಡಾ. ಯು.ಟಿ.ಇಫ್ತಿಕಾರ್ ಅಲಿ, ಹಾಮಿದ್ ಇಂಬಿಚ್ಚಿಕೋಯ ತಂಙಳ್, ಮಶ್ಹೂದ್ ತಂಙಳ್, ಔಖಾಫ್ ಬೋರ್ಡ್ ಮಾಜಿ ಅಧ್ಯಕ್ಷ ಮೌಲಾನಾ ಶಾಫಿ ಸಅದಿ, ಅಬ್ದುರ್ರಶೀದ್ ಝೈನಿ, ಬೆಂಗಳೂರು ಬಿಬಿಎಂಪಿ ಮಾಜಿ ವಿಪಕ್ಷ ನಾಯಕ ಉಬೈದುಲ್ಲಾ, ಉದ್ಯಮಿ ಮುಸ್ತಾಕ್ ಖಾದಿರ್, ಕೆಪಿಸಿಸಿಯ ಇನಾಯತ್ ಅಲಿ ಮುಲ್ಕಿ, ಜಿಲ್ಲಾ ಔಖಾಫ್ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್, ಎಸ್.ಎಂ. ರಶೀದ್ ಹಾಜಿ, ಶಾಹುಲ್ ಹಮೀದ್ ಕೆ.ಕೆ. ಮತ್ತಿತರರು ಉಪಸ್ಥಿತರಿದ್ದರು.