ಹೊಸಪೇಟೆ:- ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ಮೇ 20ಕ್ಕೆ ಎರಡು ವರ್ಷ ಪೂರ್ಣಗೊಳ್ಳುವ ಹಿನ್ನೆಲೆ ನಿಗದಿಯಂತೆ ಹೊಸಪೇಟೆಯಲ್ಲಿ ಪಕ್ಷದ ಸಮಾವೇಶ ನಡೆಸಲು ತೀರ್ಮಾನ ಮಾಡಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸೇರಿದಂತೆ ಕೆ.ಸಿ ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ, ಹರಿಪ್ರಸಾದ್ ಸಹಿತ ಪಕ್ಷದ ನಾಯಕರು ಭಾಗವಹಿಸಲಿದ್ದಾರೆ.
ಅಂದು ರಾಜ್ಯದ ಹಟ್ಟಿ, ತಾಂಡಾದಂತಹ ಖಾಸಗಿ ಜಮೀನುಗಳಲ್ಲಿರುವ ದಾಖಲೆ ರಹಿತ ಜನವಸತಿ ಪ್ರದೇಶಗಳ 1ಲಕ್ಷ ಕುಟುಂಬಗಳಿಗೆ ಶಾಶ್ವತ ಹಕ್ಕುಪತ್ರ ನೀಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲು ಕಾಂಗ್ರೆಸ್ ಸರಕಾರ ತೀರ್ಮಾನಿಸಿದೆ.
ಈ ಹಕ್ಕುಪತ್ರ ಡಿಜಿಟಲ್ ರೂಪದಲ್ಲಿ ಇರಲಿದ್ದು, ಇದರಿಂದ ಅಕ್ರಮಗಳಿಗೆ ಅವಕಾಶ ಇರುವುದಿಲ್ಲ. ಈ ಐತಿಹಾಸಿಕ ಕಾರ್ಯಕ್ರಮದ ಯಶಸ್ಸಿಗಾಗಿ ಪ್ರತೀ ಸಚಿವರಿಗೆ ತಲಾ 2 ವಿಧಾನಸಭಾ ಕ್ಷೇತ್ರಗಳ ಜವಾಬ್ದಾರಿ ವಹಿಸಲಾಗಿದೆ. ಅವರು ಮೇ 15ರ ಒಳಗೆ ಸಭೆ ನಡೆಸಿ, ಫಲಾನುಭವಿಗಳ ಪಟ್ಟಿಯನ್ನು ಹೊಲಿಕೆ ಮಾಡಿ ಖಾತ್ರಿಪಡಿಸಿಕೊಳ್ಳಬೇಕು. ಜತೆಗೆ ಸಮಾವೇಶಕ್ಕೆ ಜನರನ್ನು ಸೇರಿಸಲು ಗುರಿಯನ್ನು ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್, ಸಂತೋಷ್ ಲಾಡ್, ಕೃಷ್ಣ ಬೈರೇಗೌಡ, ಎನ್.ಎಸ್.ಬೋಸರಾಜು ಮತ್ತು ಇತರರು ಸೇರಿದಂತೆ ಹಿರಿಯ ಸಚಿವರಿಗೆ ಫಲಾನುಭವಿಗಳನ್ನು ಗುರುತಿಸುವ ಮತ್ತು ಅವರೊಂದಿಗೆ ಸಂವಹನ ನಡೆಸುವ ಕೆಲಸವನ್ನು ನೀಡಿದ್ದಾರೆ.
ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವ ಬಗ್ಗೆ ಚರ್ಚಿಸಲಿದ್ದಾರೆ. ಅತೀ ಶೀಘ್ರವಾಗಿ ಸಭೆಗಳನ್ನು ಪೂರ್ಣಗೊಳಿಸಲು ಸಚಿವರಿಗೆ ಸೂಚನೆ ನೀಡಲಾಗಿದೆ.