ಬೆಂಗಳೂರು:- ದೆಹಲಿಯಲ್ಲಿ ನಡೆಯಲಿರುವ ಸಭೆಗೆ ಆಗಮಿಸುವಂತೆ ಹೈಕಮಾಂಡ್ ರಾಜ್ಯ ನಾಯಕತ್ವಕ್ಕೆ ಬುಲಾವ್ ನೀಡಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದೆಹಲಿಗೆ ತೆರಳಲಿದ್ದು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈಗಾಗಲೇ ದೆಹಲಿಯಲ್ಲಿ ಇದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವರಿಷ್ಠರಾದ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸಿಎಂರವರೊಂದಿಗೆ ಚರ್ಚೆ ನಡೆಸಲಿದ್ದಾರೆ.
ಈ ಸಭೆಯಲ್ಲಿ ಮುಖ್ಯಮಂತ್ರಿ ಸಚಿವ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ನಡೆಯಲಿದೆ ಎಂದು ಮೂಲಗಳು ಹೇಳಿವೆ. ಕಾಂಗ್ರೆಸ್ ವಲಯದಲ್ಲಿ ಹಾಲಿ ನಡೆದಿರುವ ಚರ್ಚೆಗಳ ಪ್ರಕಾರ, ರಾಜ್ಯ ಸರ್ಕಾರದ ಎಂಟರಿಂದ ಹತ್ತು ಮಂದಿ ಹಿರಿಯ ಸಚಿವರುಗಳ ಕಾರ್ಯವೈಖರಿ ಬಗ್ಗೆ ಹೈಕಮಾಂಡ್ ತೀವ್ರ ಅಸಮಾಧಾನ ಹೊಂದಿದೆ. ಅವರೆಲ್ಲರನ್ನೂ ಸಂಪುಟದಿಂದ ಕೈಬಿಟ್ಟು ಉತ್ಸಾಹಿ ಶಾಸಕರುಗಳಿಗೆ ಅವಕಾಶ ನೀಡುವ ಆಲೋಚನೆ ಹೊಂದಿದೆ.
ಹಾಲಿ ಸಚಿವ ಸಂಪುಟದ ಎಂಟರಿಂದ ಹತ್ತು ಸಚಿವರು ಉತ್ತಮ ಆಡಳಿತ ನೀಡುವ ಬಗ್ಗೆ ಗಮನ ಕೊಡುತ್ತಿಲ್ಲ. ಅಲ್ಲದೆ, ಭ್ರಷ್ಟಾಚಾರ ತಡೆಗೂ ಕ್ರಮ ಕೈಗೊಂಡಿಲ್ಲ. ವಿಶೇಷವಾಗಿ ಸಚಿವರ ವಿಶೇಷಾಧಿಕಾರಿಗಳು ಹಾಗೂ ಆಪ್ತರೇ ಇಂತಹ ಕೃತ್ಯಗಳಲ್ಲಿ ತೊಡಗಿಕೊಂಡಿರುವ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರಿಂದಲೇ ಆರೋಪಗಳಿದ್ದರೂ ಆ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಅಷ್ಟೇ ಏಕೆ, ಈ ಸಚಿವರು ವಿಧಾನಸೌಧದತ್ತ ತಲೆಹಾಕುತ್ತಿಲ್ಲ ಎಂಬ ವರದಿಗಳು ಹೈಕಮಾಂಡ್ ಮುಟ್ಟಿವೆ. ಅಲ್ಲದೆ, ಸಂಪುಟದ ಕೆಲ ಹಿರಿಯ ಸಚಿವರಿಗೂ ಕೊಕ್ ನೀಡಿ, ಪಕ್ಷದ ಕೆಲಸದಲ್ಲಿ ತೊಡಗಿಕೊಳ್ಳುವಂತೆ ಮಾಡುವ ಇರಾದೆಯೂ ಹೈಕಮಾಂಡ್‌ಗೆ ಇದೆ ಎನ್ನಲಾಗಿದೆ.
ಸಂಪುಟ ಪುನಾರಚನೆ ವೇಳೆ ವಿಧಾನಸಭೆ ಸಭಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸಭಾಪತಿ ಸ್ಥಾನಗಳಿಗೂ ಬದಲಾವಣೆ ತರುವ ಸಾಧ್ಯತೆ ಇದೆ. ಜೊತೆಗೆ ವಿಧಾನ ಪರಿಷತ್‌ನ ಪಕ್ಷದ ಕೆಲ ಹಿರಿಯ ಸದಸ್ಯರನ್ನೂ ಸಂಪುಟಕ್ಕೆ ತೆಗೆದುಕೊಳ್ಳುವ ಆಲೋಚನೆ ಇದೆ ಎಂದು ಹೇಳಲಾಗುತ್ತಿದೆ.