ಬೆಂಗಳೂರು

ಸಿಎಂ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿರುವುದು ಡಿಕೆಶಿ ಮಾತ್ರ.- ಅಶೋಕ್ ಪಟ್ಟಣ್

ಬೆಂಗಳೂರು:- ಕಳೆದ ಕೆಲ ದಿನಗಳವರೆಗೂ ಡಿ.ಕೆ.ಶಿವಕುಮಾರ್ ಅವರು ಹೈಕಮಾಂಡ್ ಮಟ್ಟದಲ್ಲಿ ಸಿಎಂ ಬದಲಾವಣೆಗಾಗಿ ಪಟ್ಟು ಹಿಡಿದು ಹೋರಾಟ ನಡೆಸಿದ್ದರು. ಇದೇ ವಿಚಾರ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಗುಂಪುಗಾರಿಕೆಗೂ ಕಾರಣವಾಗಿತ್ತು. ಹೈಕಮಾಂಡ್ ಅಂಗಳ ತಲುಪಿದ್ದ ಸಿವಿಚಾರ ಅಂತಿಮವಾಗಿ ವರಿಷ್ಠರ ಮಧ್ಯಪ್ರವೇಶದಿಂದ ತಣ್ಣಗಾಗಿತ್ತು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಐದು ವರ್ಷ ಮುಂದುವರೆಯಲು ಡಿ.ಕೆ.ಸಹೋದರರ ಬೆಂಬಲ ಇದೆ ಎಂದು ಹಿರಿಯ ಶಾಸಕ, ಸಿಎಂ ಆಪ್ತರಾಗಿರುವ ವಿಧಾನಸಭೆ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ನೀಡಿರುವ ಹೇಳಿಕೆ ಹೆಚ್ಚು ಮಹತ್ವ ಪಡೆದುಕೊಂಡಿದೆ. ಮಾಧ್ಯಮದೊಂದಿಗೆ ಮಾತನಾಡಿದ ಅಶೋಕ್ ಪಟ್ಟಣ್ ಅವರು, ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡುವ ಪ್ರಶ್ನೆ ಇಲ್ಲ. ಸಿದ್ದರಾಮಯ್ಯ ಅವರನ್ನು ಎಲ್ಲಾ ಶಾಸಕರು ಐದು ವರ್ಷದ ಅವಧಿಗಾಗಿ ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ. ಇದಕ್ಕೆ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಕೂಡ ಬೆಂಬಲಿಸಿದ್ದಾರೆ. ಎಲ್ಲ ಶಾಸಕರ ಸಮ್ಮತಿಯಿಂದ ಆಯ್ಕೆಯಾಗಿರುವ ಸಿದ್ದರಾಮಯ್ಯ ಅವರು ಐದು ವರ್ಷ ಪೂರ್ಣಗೊಳಿಸಲಿದ್ದಾರೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿರುವುದು ಡಿ.ಕೆ.ಶಿವಕುಮಾರ್ ಮಾತ್ರ. ಅದಕ್ಕೆ ಹಣೆಬರಹದಲ್ಲಿ ಬರೆದಿರಬೇಕು, ಸಿಎಂ ಆಗಲು ಅನುಭವ, ಬುದ್ದಿವಂತಿಕೆ ಇರಬೇಕು. ಅದು ಸಿದ್ದರಾಮಯ್ಯ ಅವರಿಗಿದೆ. ಎಲ್ಲರಿಗೂ ಸಿಎಂ ಆಗುವ ಯೋಗ ಬರುವುದಿಲ್ಲ ಎಂದು ಅಶೋಕ್ ಪಟ್ಟಣ್ ಹೇಳಿದ್ದಾರೆ. ಸಿಎಂ ಕುರ್ಚಿಯ ಬಗ್ಗೆ ರಾಜಕೀಯ ವಲಯ ಅದರಲ್ಲೂ ಕಾಂಗ್ರೆಸ್ ಪಾಳಯದಲ್ಲಿ ನಡೆಯುತ್ತಿರುವ ಚರ್ಚೆಯ ಬೆನ್ನಲ್ಲೇ ವಿಧಾನಸಭೆ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ನೀಡಿರುವ ಈ ಹೇಳಿಕೆ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ.

ಹೈಕಮಾಂಡ್ ಮಟ್ಟದಲ್ಲಿ ಸಿಎಂ ಬದಲಾವಣೆಗೆ ಲಾಬಿ ಆರಂಭಿಸಿದ ಡಿಕೆಶಿ ಅವರಿಗೆ ಸಿಎಂ ಆಪ್ತ ಸಚಿವರು ಕಾಂಗ್ರೆಸ್ ನಾಯಕತ್ವ ಬದಲಾವಣೆಯ ಚೆಕ್‌-ಮೇಟ್‌ ನೀಡಿದ್ದರು. ಸರ್ಕಾರದ ಸಚಿವರ ನಡುವಿನ ಏಟು-ಎದಿರೇಟು ಹೈಕಮಾಂಡ್ ಅಂಗಳ ತಲುಪಿ, ಸಿಎಂ ಬದಲಾವಣೆ ಹಾಗೂ ನಾಯಕತ್ವದ ಬದಲಾವಣೆಗೆ ಚರ್ಚೆಗೆ ಬ್ರೇಕ್ ಹಾಕಿತ್ತು.

ಮುಖ್ಯಮಂತ್ರಿ ಆಯ್ಕೆ ವೇಳೆ ಹೈಕಮಾಂಡ್ ಮಟ್ಟದಲ್ಲಿ ಯಾವ ಒಪ್ಪಂದವಾಗಿದೆ ಎಂಬ ವಿಚಾರ ಕೆಲವರಿಗೆ ಬಿಟ್ಟರೆ ಬೇರೆ ಯಾರಿಗೂ ಗೊತ್ತಿಲ್ಲ. ಆ ವೇಳೆ ಒಪ್ಪಂದ ಆಗಿದೆಯೋ, ಇಲ್ಲವೋ ಅಥವಾ ಏನು ಚರ್ಚೆಯಾಗಿದೆ ಎಂಬುದು ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಎಐಸಿಸಿ ಪ್ರಧಾನಿ ಕಾರ್ಯದರ್ಶಿ ವೇಣುಗೋಪಾಲ್, ಅಧಿನಾಯಕಿ ಸೋನಿಯಾಗಾಂಧಿ, ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತ್ರ ಗೊತ್ತಿದೆ.