ಬೆಂಗಳೂರು

ಸುಹಾಸ್ ಶೆಟ್ಟಿ ಕುಟುಂಬದೊಂದಿಗೆ ರಾಜ್ಯಪಾಲರ ಭೇಟಿ ಮಾಡಿದ ಬಿಜೆಪಿ ತಂಡ

ಬೆಂಗಳೂರು:- ಸುಹಾಸ್ ಹತ್ಯೆ ಪ್ರಕರಣದಲ್ಲಿ ವಿದೇಶಿ ಹಣದ ಹರಿವಿನ ಚರ್ಚೆ ನಡೆಯುತ್ತಿದೆ ಜೊತೆಗೆ ಪಿಎಫ್‍ಐ ನಂಟು ಕೂಡ ಕಾಣುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಹೇಳಿದ್ದಾರೆ. ಇಂದು ಹತ್ಯೆಯಾದ ಸುಹಾಸ್ ಶೆಟ್ಟಿ ಕುಟುಂಬ ಹಾಗೂ ಬಿಜೆಪಿ ಜನಪ್ರತಿನಿಧಿಗಳು ರಾಜ್ಯಪಾಲರನ್ನು ಭೇಟಿ ಮಾಡಿ ಎನ್ಐಎಗೆ ಹತ್ಯೆಯ ವಿಚಾರಣೆ ನೀಡಲು ಮನವಿ ಮಾಡಿ ಮಾಧ್ಯಮದೊಂದಿಗೆ ಮಾತನಾಡಿದರು.

ಅವರು ಸುಹಾಸ್ ಹತ್ಯೆ ಸಂದರ್ಭದಲ್ಲಿ ಬಿಜೆಪಿ ವತಿಯಿಂದ ಮಂಗಳೂರು ಚಲೋ ಮಾಡಲು ತೀರ್ಮಾನ ಮಾಡಿದ್ದೆವು. ಆಪರೇಷನ್ ಸಿಂಧೂರ್ ಪ್ರಾರಂಭವಾದ ಸಂದರ್ಭದಲ್ಲಿ ಶಾಂತಿ ಕಾಪಾಡಲು ಮತ್ತು ದೇಶದ ಜೊತೆ ನಿಲ್ಲಬೇಕೆಂದು ಹಾಗೇ ಇದ್ದೆವು. ಆದರೆ, ಸುಹಾಸ್ ಹತ್ಯೆ ಆದ ನಂತರದಲ್ಲಿ ನಡೆಯುತ್ತಿರುವ ತನಿಖೆಯು ಅನುಮಾನಕ್ಕೆ ಆಸ್ಪದ ಮಾಡಿಕೊಟ್ಟಿದೆ ಎಂದು ಟೀಕಿಸಿದರು.
ಅನೇಕ ಕಾರುಗಳನ್ನು ಬಳಸಿದ್ದರೂ ಒಂದೆರಡು ಕಾರನ್ನಷ್ಟೇ ವಶಕ್ಕೆ ಪಡೆದಿದ್ದಾರೆ. ಕೇವಲ 10 ಜನರನ್ನಷ್ಟೇ ಬಂಧಿಸಿದ್ದಾರೆ. ಇನ್ನೂ 15- 20 ಜನರು ಇದರ ಹಿಂದಿರುವ ಮಾಹಿತಿ ಸಿಗುತ್ತಿದೆ. ಕೊಲೆಗಾರರಿಗೆ ರಕ್ಷಣೆ ಕೊಡುವ ಕೆಲಸ ಮಾಡಿದ್ದ ಮಹಿಳೆಯರನ್ನು ಬಂಧಿಸಿಲ್ಲ, ಹೊರದೇಶದಿಂದಲೂ ಹಣ ಬಂದ ಮಾಹಿತಿ ಸಿಗುತ್ತಿದೆ ಎಂದು ತಿಳಿಸಿದರು.

ಕೊಲೆಯಲ್ಲಿ ಭಾಗಿ ಆದವರಿಗೆ ಪಿಎಫ್‍ಐ ಜೊತೆ ಮಾಹಿತಿ ಇರುವ ವಿಷಯ ಹೊರ ಬರುತ್ತಿದೆ. ಇದರ ಜೊತೆಗೇ ಬೇರೆ ಇಬ್ಬರು, ಮೂವರು ಹಿಂದೂ ಕಾರ್ಯಕರ್ತರಿಗೆ ಸಹ ಸುಹಾಸ್ ಅವರ ಮರ್ಡರ್ ಮಾಡಿದ್ದೇವೆ. ಮುಂದಿನ ಗುರಿ ನೀವು ಎಂಬ ಬೆದರಿಕೆಯನ್ನೂ ಹಾಕಲಾಗುತ್ತಿದೆ ಎಂದು ಹೇಳಿದರು.

ಫಾಝಿಲ್ ಅವರ ಕುಟುಂಬದವರು ಇದರಲ್ಲಿ ಇಲ್ಲ ಎಂದು ಸ್ಪೀಕರ್ ಅವರ ಹೇಳಿಕೆಯು ಪರೋಕ್ಷವಾಗಿ ರಕ್ಷಣೆ ಕೊಡುವಂತಿದೆ. ಗೃಹ ಸಚಿವ ಪರಮೇಶ್ವರ್ ಅವರು, ತನಿಖೆ ಪ್ರಾರಂಭಕ್ಕೂ ಮೊದಲು ಎನ್‍ಐಎಗೆ ಕೊಡಲು ಸಾಧ್ಯ ಇಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಈ ಹೇಳಿಕೆಗಳಿಂದ ಅಲ್ಲಿನ ಪೊಲೀಸರು ಯಾವ ರೀತಿ ಪ್ರಾಮಾಣಿಕವಾಗಿ ತನಿಖೆ ಮಾಡಲು ಸಾಧ್ಯವಿದೆ ಎಂದು ಪ್ರಶ್ನಿಸಿದರು. ಇನ್ನುಳಿದ ಹಿಂದೂ ಕಾರ್ಯಕರ್ತರಿಗೆ ಯಾವ ರೀತಿ ರಕ್ಷಣೆ ನಿರೀಕ್ಷಿಸಲು ಸಾಧ್ಯ ಎಂದು ಕೇಳಿದರು.

ಸ್ಥಳೀಯ ಕಾಂಗ್ರೆಸ್ ನಾಯಕರು ಆ ಕುಟುಂಬವನ್ನು ಮಾತನಾಡಿಸುವ ಕೆಲಸ ಮಾಡಿಲ್ಲ. ಮಂಗಳೂರಿಗೆ ಬಂದಿದ್ದ ಗೃಹ ಸಚಿವರು, ಅಲ್ಪಸಂಖ್ಯಾತ ಮುಖಂಡರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅವರು ಹೊರಕ್ಕೆ ಹೋಗಲೂ ಬಿಡುವುದಿಲ್ಲ, ಗೃಹ ಸಚಿವರನ್ನು ತಡೆಯುವ ಕೆಲಸವನ್ನೂ ಮಾಡಿದ್ದಾರೆ ಎಂದರು. ಸುಹಾಸ್ ಅವರ ಹತ್ಯೆಯಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿಲ್ಲ. ಆದರೆ, ಬೆದರಿಕೆ ಬಂದ ಉಳಿದ ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಕೊಡಬೇಕಿದೆ ಎಂದು ಆಗ್ರಹಿಸಿದರು.