ಬೆಂಗಳೂರು

ಸೆಲೆಬ್ರಿಟಿ ನೋಡಿ ಉತ್ಪನ್ನ ಖರೀದಿಸುವ ಕಾಲ ಹೋಯ್ತು.- ನಟಿ ರಮ್ಯಾ

ಬೆಂಗಳೂರು:- ಮೈಸೂರು ಸ್ಯಾಂಡಲ್ ಸೋಪ್ ನ ರಾಯಭಾರಿಯಾಗಿ 2 ವರ್ಷಗಳ ಅವಧಿಗೆ 6 ಕೋಟಿ ರೂಪಾಯಿ ನೀಡಿ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರನ್ನು ನೇಮಕ ಮಾಡಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಪರ ವಿರೋಧ ಚರ್ಚೆ ಸಾಕಷ್ಟು ನಡೆಯುತ್ತಿದೆ.

ಈ ಬಗ್ಗೆ ಇಂದು ಇನ್ಸ್ಟಾಗ್ರಾಮ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ, ಇಂದು ಒಂದು ವಸ್ತುವನ್ನು ಮಾರುಕಟ್ಟೆಯಲ್ಲಿ ಪ್ರಚಾರ ಮಾಡಲು ಹತ್ತಾರು ದಾರಿಗಳಿರುತ್ತವೆ.

ಪ್ರತಿಯೊಬ್ಬರಿಗೆ ಅರ್ಥಪೂರ್ಣವಾಗಿ ಮಾಹಿತಿ ನೀಡಲು ಸುಲಭ ಮಾರ್ಗಗಳಿವೆ. ಇದಕ್ಕೆ ಹಳೇ ಕಾಲದಲ್ಲಿರುವ ಪದ್ಧತಿಯ ಪ್ರಚಾರ ರಾಯಭಾರಿಯೇ ಬೇಕಾಗಿಲ್ಲ. ತೆರಿಗೆದಾರರ ದುಡ್ಡನ್ನು ಪ್ರಚಾರ ರಾಯಭಾರಿಗೆ ಕೊಡುವುದು ತಪ್ಪು ಎಂದು ರಮ್ಯಾ ಹೇಳಿದ್ದಾರೆ.

ಸೆಲೆಬ್ರಿಟಿ ನೋಡಿ ಉತ್ಪನ್ನ ಖರೀದಿಸುವ ಕಾಲ ಹೋಯ್ತು

ಈಗ ಜಮಾನ ಬದಲಾಗಿದೆ, ಸೆಲೆಬ್ರೆಟಿಗಳನ್ನು ನೋಡಿ ಕಣ್ಮುಚ್ಚಿ ಉತ್ಪನ್ನ ಖರೀದಿಸುವ ಕಾಲವಲ್ಲ. ಉತ್ಪನ್ನ ಉತ್ತಮವಾಗಿದ್ದರೆ ಜನರು ಖರೀದಿಸಿದ್ದಾರೆ. ಮೈಸೂರು ಸ್ಯಾಂಡಲ್ ಸೋಪ್ ಉತ್ಪನ್ನ ಅತ್ಯುತ್ತಮ ಗುಣಮಟ್ಟ ಕಾಯ್ದುಕೊಂಡಿದೆ. ಇದಕ್ಕೆ ಅತೀ ದೊಡ್ಡ ಇತಿಹಾಸವೂ ಇದೆ. ಮೈಸೂರು ಸ್ಯಾಂಡಲ್ ಸೋಪ್‌ಗೆ ಘನತೆ, ಜನಪ್ರಿಯತೆ ಎರಡೂ ಇದೆ. ಮೈಸೂರು ಸ್ಯಾಂಡಲ್ ಸೋಪ್‌ಗೆ ಪ್ರತಿಯೊಬ್ಬ ಕನ್ನಡಿಗರೇ ರಾಯಭಾರಿ ಎಂದು ರಮ್ಯಾ ಹೇಳಿದ್ದಾರೆ.