ದಕ್ಷಿಣ ಕನ್ನಡ

ಹರಿಪ್ರಸಾದ್ ದ.ಕ ಭೇಟಿ: ಪರೋಕ್ಷವಾಗಿ ವಿರೋಧ ಮಾಡುವ ಗುಂಪು ಸಜ್ಜು.!?

ಮಂಗಳೂರು:- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತೀಯ ವಿಭಜನೆಯಾಗಿ ಮತೀಯ ಸಂಘಟನೆಗಳು ಬಲಿಷ್ಠವಾಗಿ ರಾಜಕೀಯ ಬೆಂಬಲದೊಂದಿಗೆ ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ಈ ಸಂಘಟನೆಗಳು ಬೇರೂರಿ ದ್ವೇಷ, ಅಪನಂಬಿಕೆಗಳು ಜಿಲ್ಲೆಯ ಜನರನ್ನು ಮತೀಯವಾಗಿ ವಿಭಜಿಸಿದೆ. ಹೀಗಿರುವಾಗ ಸರ್ಕಾರದ ಕ್ರಮಗಳು ತಳಮಟ್ಟದಲ್ಲಿ ಯಾವ ರೀತಿಯಲ್ಲಿ ಪರಿಣಾಮ ಬೀರಲಿದೆ ಎಂಬುವುದು ಬಹುಮುಖ್ಯ.

ಕೆಟ್ಟಿರುವ ಜಿಲ್ಲೆಯ ವಾತಾವರಣವನ್ನು ಸರಿಪಡಿಸುವುದು ಅಷ್ಟೊಂದು ಸುಲಭವಲ್ಲ. ಆದರೆ, ಹದಗೆಟ್ಟಿರುವ ಕಾನೂನು ಸುವ್ಯವಸ್ಥೆಯನ್ನು ಸರಿಪಡಿಸುವ ಜವಾಬ್ದಾರಿ ಪೊಲೀಸ್ ಇಲಾಖೆಗಿದೆ. ಪೊಲೀಸ್ ಇಲಾಖೆ ಸರಿಯಾದ ರೀತಿಯಲ್ಲಿ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡರೆ ಮತೀಯ ಕೊಲೆಗಳಿಗೆ ಕಡಿವಾಣ ಹಾಕಲು ಸಾಧ್ಯವಿದೆ ಎಂಬ ಅಭಿಪ್ರಾಯ ಜಿಲ್ಲೆಯ ಜನಸಾಮಾನ್ಯರಲ್ಲಿದೆ.

ನಿರಂತರವಾಗಿ ಜಿಲ್ಲೆಯಲ್ಲಿ ನಡೆಯುತ್ತಿರುವ ಮತೀಯ ಕಲಹಕ್ಕೆ ಅಮಾಯಕರು ಬಲಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ಕಠಿಣ ನಿಲುವುಗಳನ್ನು ಕೈಗೊಂಡಿದೆ. ಹೀಗಾಗಿ ಇಷ್ಟೆಲ್ಲಾ ಬಿಗಿ ಕ್ರಮಗಳನ್ನು ಕೈಗೊಂಡಿದೆ. ಆದರೆ, ಇದರ ಪರಿಣಾಮ ಏನಾಗಲಿದೆ ಎಂಬುವುದು ಅಷ್ಟೇ ಕುತೂಹಲ. ಇಷ್ಟೇ ಅಲ್ಲದೆ, ಜಿಲ್ಲೆಯಲ್ಲಿ ಮತೀಯ ಸಂಘರ್ಷಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ವಿಶೇಷ ಕಾರ್ಯಪಡೆಯನ್ನು ಸ್ಥಾಪನೆ ಮಾಡಲಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಅಧಿಕೃತ ಆದೇಶವನ್ನು ಹೊರಡಿಸಿದೆ. ಎಎನ್‌ಎಫ್ ಮಾದರಿಯಲ್ಲಿ ಇದು ಕಾರ್ಯಾಚರಣೆ ನಡೆಸಲಿದ್ದು, ಇದರ ಸ್ವರೂಪ ಹೇಗಿರಲಿದೆ ಎಂಬುವುದು ಇನ್ನೂ ಅಧಿಕೃತಗೊಂಡಿಲ್ಲ.

ಸ್ವತಃ ಸಿಎಂ ಸಿದ್ದರಾಮಯ್ಯ ಅವರು ವಿಧಾನ ಪರಿಷತ್ ಸದಸ್ಯರಾದ ಬಿ.ಕೆ ಹರಿಪ್ರಸಾದ್ ಅವರ ಮನೆಗೆ ತೆರಳಿ ಸುಧೀರ್ಘ ಮಾತುಕತೆ ನಡೆಸಿದಲ್ಲದೆ, ಜಿಲ್ಲೆಗೆ ತೆರಳಿ ಪರಿಸ್ಥಿತಿ ಅವಲೋಕನ ಮಾಡುವಂತೆ ಮನವಿ ಮಾಡಿದ್ದಾರೆ. ಬಿಕೆಹೆಚ್ ಜಿಲ್ಲೆಗೆ ತೆರಳಿ ವಿವಿಧ ಸಂಘಟನೆಗಳು ಹಾಗೂ ಸಾಮಾಜಿಕ ಕಾರ್ಯಕರ್ತರ ಜೊತೆಗೆ ಸಭೆ ನಡೆಸಲಿದ್ದಾರೆ ಎಂಬ ಮಾಹಿತಿಯ ಜೊತೆಗೆ ಅಲ್ಲಿ ಅವರನ್ನು ಪಕ್ಷದ ಮುಖಂಡರು ಅವರನ್ನು ಸ್ವಾಗತಿಸುವ ಕ್ರಮವನ್ನು ಕೂಡ ಗಮನಿಸಬೇಕಾಗಿದೆ, ಜಿಲ್ಲೆಯಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಏನೆಲ್ಲಾ ಕ್ರಮ ಆಗಬೇಕು ಎಂಬುವುದರ ಬಗ್ಗೆ ಅವರು ಚರ್ಚೆ ನಡೆಸಬೇಕಾದರೆ ಸ್ಥಳೀಯ ಮುಖಂಡರ ಸಹಕಾರ ಅತ್ಯಮೂಲ್ಯ, ಇದು ಹರಿಪ್ರಸಾದ್ ಅವರಿಗೆ ಸುಲಭವಾಗಿ ಸಿಗುವ ತುತ್ತಲ್ಲವೆಂಬುದು ಅವರಿಗೆ ತಿಳಿದಿದೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರೇ ಆಗಿರುವುದರಿಂದ ಜಿಲ್ಲೆಯ ಪರಿಸ್ಥಿತಿ ಅವರಿಗೆ ಚೆನ್ನಾಗಿ ಅರಿವಿದೆ. ಅ ಭಾಗದಲ್ಲಿ ಹಾಲಿ ಇರುವ ಕಾಂಗ್ರೆಸ್ ಪಕ್ಷದ ಕೆಲ ನಾಯಕರು ಹರಿಪ್ರಸಾದ್ ರವರು ಈ ಭಾಗದಲ್ಲಿ ಯಶಸ್ಸು ಕಂಡರೆ ಹೈಕಮಾಂಡ್ ಮೊದಲು ಮಣೆ ಇವರಿಗೆ ಸಲ್ಲುತ್ತದೆ ಎಂದು ಪರೋಕ್ಷವಾಗಿ ವಿರೋಧ ಮಾಡುವ ಗುಂಪೊಂದು ಸಜ್ಜಾಗಿರುವುದರಿಂದ ಅವರು ಈ ಜವಾಬ್ದಾರಿಯನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ.