ಬೆಂಗಳೂರು

ಹೆಚ್.ಡಿ ಕುಮಾರಸ್ವಾಮಿಯವರಿಂದ ಅಲ್ಪಸಂಖ್ಯಾತರ ಮನವೊಲಿಸಲು ವೇದಿಕೆ ಸಜ್ಜು.!?

ಬೆಂಗಳೂರು:- ಕರ್ನಾಟಕದ ಮೂಲೆ ಮೂಲೆಗಳಲ್ಲಿ ಒಂದು ಕಾಲದಲ್ಲಿ ಜಾತ್ಯಾತೀತ ಜನತಾದಳ ಗ್ರಾಮದಿಂದ ರಾಜ್ಯದವರೆಗೂ ಅಧಿಕಾರದ ಚುಕ್ಕಾಣಿ ಹಿಡಿದು ವಿರಾಜಮಾನವಾಗಿ ಮೆರೆಯುತ್ತಿತ್ತು. ಈ ರಾಜ್ಯಕ್ಕೆ ಒಂದು ಪ್ರಾದೇಶಿಕ ಪಕ್ಷದ ಅನಿವಾರ್ಯ ಇದ್ದ ಕಾರಣದಿಂದಾಗಿ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್-ಬಿಜೆಪಿ ಒಂದೇ ನಾಣ್ಯದ ಮುಖವೆಂದು ತಿರಸ್ಕಾರ ಮಾಡಿ ಜೆಡಿಎಸ್ ಪಕ್ಷದೊಂದಿಗೆ ಜನಸಾಮಾನ್ಯರು ಗುರುತಿಸಿಕೊಂಡಿದ್ದರು ಎಂದರೆ ತಪ್ಪಾಗಲಾರದು.

ಇಲ್ಲಿ ಜಾತಿಮತ ಭೇಧವಿರಲಿಲ್ಲ, ದೇವೇಗೌಡರ ಪಕ್ಷವೆಂಬ ಧೃಡ ಸಂಕಲ್ಪ ಎಲ್ಲರಲ್ಲಿಯೂ ನೆಲೆಯೂರಿತ್ತು. ಇತ್ತೀಚೆಗೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಕುಮಾರಸ್ವಾಮಿ ಬಿಜೆಪಿಯೊಂದಿಗೆ ಹೊಂದಾಣಿಗೆ ಮಾಡಿಕೊಂಡು ಅಲ್ಪಸಂಖ್ಯಾತರನ್ನು ದೂರಲು ಅರಂಭಿಸಿದರು. ಈ ಹಿಂದೆ ಹೊರ ದೇಶ ದುಬಾಯಿಗೆ ತೆರಳಿ ನಮ್ಮ ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಅಲ್ಪಸಂಖ್ಯಾತರನ್ನು ನೇಮಿಸುತ್ತೇನೆ ಎಂದೆಲ್ಲ ಹೇಳಿದ್ದನ್ನು ಕೇಳಿದ್ದೇವು, ಅದಕ್ಕೆ ಬೇಕಾದ ಸಿದ್ಧತೆ ಕೂಡ ನಡೆದಿತ್ತು.

ಬಿ.ಎಂ ಫಾರೂಖ್ ಸೇರಿದಂತೆ ಜಫ್ರುಲ್ಲಾ ಖಾನ್, ಅಲ್ತಾಫ್, ಒಂದಷ್ಟು ಬಿಬಿಎಂಪಿಯ ಕಾರ್ಪೊರೇಟರ್ ಕುಮಾರಸ್ವಾಮಿಯವರ ಬೆನ್ನೆಲುಬಾಗಿದ್ದು, ಇತರೆ ಸಮುದಾಯದ ಪ್ರಮುಖರು ಪಕ್ಷದಲ್ಲಿದ್ದರು. ರಾಮನಗರ, ಚನ್ನಪಟ್ಟಣ ಚುನಾವಣೆಯಲ್ಲಿ ಮಗನಿಗೆ, ತನ್ನ ಪಕ್ಷಕ್ಕೆ ಸೋಲಾಯಿತು. ಅಲ್ಲಿ ಜೆಡಿಎಸ್ ಪಕ್ಷವನ್ನು ಜನ ನಂಬಲಿಲ್ಲ ಅಭ್ಯರ್ಥಿಗಳಿಗೆ ಸೋಲಾಯಿತು. ಅಂದಿನಿಂದಲೂ ಅಲ್ಪಸಂಖ್ಯಾತರನ್ನು ದೂರಲು ಆರಂಭಿಸಿದರು. ಅಲ್ಪಸಂಖ್ಯಾತ ಮತ ನನಗೆ ಬೇಡವೇ ಬೇಡ ಎಂಬಂತೆ ಮಾತನಾಡಿದ್ದನ್ನು ನಾವು ಕಂಡಿದ್ದೇವೆ. ಆದರೆ, ಈಗ ಇದ್ದಕ್ಕಿದ್ದಂತೆ ಅಲ್ಪಸಂಖ್ಯಾತ ಸಮುದಾಯದ ಮೇಲೆ ಪ್ರೀತಿ ಉಕ್ಕಿ ಹೆಚ್ಚುಕಡಿಮೆ ಅಲ್ಪಸಂಖ್ಯಾತರಿಂದ ಅಧಿಕಾರಕ್ಕೆ ಬಂದ ಕರ್ನಾಟಕದ ಕಾಂಗ್ರೆಸ್ ಪಕ್ಷದ ಮೇಲೆ ಸವಾರಿ ಮಾಡಲು ಅಲ್ಪಸಂಖ್ಯಾತರ ಮೂಲಕ ದಾರಿ ಮಾಡಿಕೊಂಡಂತೆ ಮೇಲ್ನೋಟಕ್ಕೆ ಅನಿಸುತ್ತಿದೆ.

ಇದಕ್ಕೆ ಪುಷ್ಟಿ ನೀಡುವಂತೆ ಶನಿವಾರ(31.05.25)ದಂದು

ರಾಜ್ಯ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಹೋರಾಟಗಳನ್ನು ಹಮ್ಮಿಕೊಳ್ಳುವುದು ಹಾಗೂ ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವ ಬಗ್ಗೆ ಬೆಂಗಳೂರಿನಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಸಭೆ ಮಾಡಲಾಗಿದೆ. ಸ್ವಾರಸ್ಯಕರ ಸಂಗತಿ ಏನೆಂದರೆ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರ ನಿರ್ದೇಶನದಂತೆ ಸದಸ್ಯತ್ವ ನೋಂದಣಿ ಅಭಿಯಾನ ಕೈಗೊಳ್ಳಲಾಗಿದೆ. ಅದರ ಮುಂದುವರೆದ ಭಾಗವಾಗಿ ಮತಗಟ್ಟೆ, ಬಡಾವಣೆ ಹಂತದಲ್ಲಿ ಪಕ್ಷದ ಸಂಘಟನೆಯನ್ನು ಬಲಗೊಳಿಸಬೇಕು. ಅಲ್ಪಸಂಖ್ಯಾತ ಮುಖಂಡರು, ಕಾರ್ಯಕರ್ತರು ಹೆಚ್ಚು ಸಕ್ರಿಯವಾಗಿ ಕೆಲಸ ಮಾಡಬೇಕು ಎಂದು ಸಭೆಯಲ್ಲಿ ಹೇಳಲಾಗಿದೆ.

ಸಭೆಯಲ್ಲಿ ಗ್ರೇಟರ್ ಬೆಂಗಳೂರು ಜನತಾದಳ ಜಾತ್ಯತೀತ ಪಕ್ಷದ ಮುಸ್ಲಿಂ ಅಲ್ಪಸಂಖ್ಯಾತರ ವಿಭಾಗದ ಮುಖಂಡರು, ಪದಾಧಿಕಾರಿಗಳು, ವಿಧಾನಸಭಾ ಕ್ಷೇತ್ರ ಅಧ್ಯಕ್ಷರು, ವಾರ್ಡ್ ಅಧ್ಯಕ್ಷರು ಹಾಗೂ ಪ್ರಮುಖರು ಭಾಗವಹಿಸಿದ್ದರು. ಬೆಂಗಳೂರು ನಗರ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಅಪ್ರೋಜ್ ಬೇಗ್, ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸೈಯದ್ ತಹಸಿನ್, ಬೆಂಗಳೂರು ನಗರ ಮಹಿಳಾ ವಿಭಾಗದ ಅಧ್ಯಕ್ಷೆ ಶೈಲಾ ಸಂತೋಷ್ ರಾವ್, ಬೆಂಗಳೂರು ನಗರ ಮಾತೃ ಘಟಕದ ಕಾರ್ಯಾಧ್ಯಕ್ಷರಾದ ಕೆ ವಿ ನಾರಾಯಣ ಸ್ವಾಮಿ, ಮಹಾ ಪ್ರಧಾನ ಕಾರ್ಯದರ್ಶಿ ಎಸ್.ರಮೇಶ್ ಮತ್ತಿತರರು ಭಾಗವಹಿಸಿದ್ದರು.

ಬಿಜೆಪಿ ಪಕ್ಷದಲ್ಲಿ ಕುಮಾರಸ್ವಾಮಿರವರಿಗೆ ಮುಂದಿನ ದಿನಗಳಲ್ಲಿ ರಾಜಕೀಯ ಸುಲಭದ ತುತ್ತಾಗುವುದಿಲ್ಲವೆಂದು ಪಕ್ಷದ ಎಲ್ಲಾ ಮುಖಂಡರಿಗೆ ತಿಳಿದೆ ಇದೆ, ಕುಮಾರಸ್ವಾಮಿ ನುಡಿದಂತೆ ನಡೆಯುವುದಿಲ್ಲ ಎಂಬುದು ತೀರ ಹತ್ತಿರದಿಂದ ಬಲ್ಲವರು ಹೇಳುತ್ತಾರೆ.

ಹಾಗಾಗಿಯೇ ಅವರ ಬಾಣ ಯಾವ ದಿಕ್ಕಿಗೆ ಗುರಿಯಾವುದು ಎಂದು ಕಾದು ನೋಡಬೇಕು.