ಚೆನ್ನೈ:- ಮಾಜಿ ಐಪಿಎಸ್ ಅಧಿಕಾರಿ, ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ.ಅಣ್ಣಾಮಲೈಗೆ ರಾಜ್ಯಸಭೆ ಉಪ ಚುನಾವಣೆ ಟಿಕೆಟ್ ಕೈತಪ್ಪಿದೆ. ಬಿಜೆಪಿ ಕೆ.ಅಣ್ಣಾಮಲೈ ಅವರನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಲಿದೆ ಎಂಬ ಸುದ್ದಿ ಹಬ್ಬಿತ್ತು.
ಬಿಜೆಪಿ ಆರ್‌ಎಸ್‌ಎಸ್ ಮೂಲದ ಪಾಕ ವೆಂಕಟ ಸತ್ಯನಾರಾಯಣ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ರಾಜ್ಯಸಭೆ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಮಂಗಳವಾರವಾದ ಇಂದೇ ಕೊನೆಯ ದಿನವಾಗಿದೆ.
ಪಾಕ ವೆಂಕಟ ಸತ್ಯನಾರಾಯಣ ಆರ್‌ಎಸ್‌ಎಸ್ ಮೂಲದವರು. ಒಬಿಸಿ ಸಮಯದಾಯಕ್ಕೆ ಸೇರಿದವರು, ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷ ಮತ್ತು ಸಂಘಟನೆಯ ಜೊತೆಗೆ ಹಂತ ಹಂತವಾಗಿ ಬೆಳೆದು ಬಂದವರಾದ್ದರಿಂದ ಅವರನ್ನು ರಾಜ್ಯಸಭಾ ಉಪ ಚುನಾವಣೆಗೆ ಅಭ್ಯರ್ಥಿ ಎಂದು ಬಿಜೆಪಿ ಘೋಷಣೆ ಮಾಡಿದೆ.
1976ರಲ್ಲಿ ಪಾಕ ವೆಂಕಟ ಸತ್ಯನಾರಾಯಣ ಆರ್‌ಎಸ್‌ಎಸ್ ಸೇರಿದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಲಕ ಅವರು ವಿದ್ಯಾರ್ಥಿ ಚಳವಳಿಯಲ್ಲಿ ಸಕ್ರಿಯರಾಗಿದ್ದರು. ಡಿಎನ್‌ಆರ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದ ಅವರು 1980ರಲ್ಲಿ ಬಿಜೆಪಿ ಸೇರಿದ್ದರು. ಪಕ್ಷದ ವಿವಿಧ ಹುದ್ದೆಗಳಲ್ಲಿ ಅವರು ಕಾರ್ಯ ನಿರ್ವಹಣೆ ಮಾಡಿದ್ದಾರೆ. 1996ರಲ್ಲಿ ಪಾಕ ವೆಂಕಟ ಸತ್ಯನಾರಾಯಣ ನಾಗ್ಪುರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. 2006ರಲ್ಲಿ ಎಂಎಲ್‌ಸಿ ಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡಿದ್ದರು. ಈಗ ಅವರಿಗೆ ರಾಜ್ಯಸಭೆ ಉಪ ಚುನಾವಣೆ ಟಿಕೆಟ್ ಅನ್ನು ಬಿಜೆಪಿ ನೀಡಿದೆ.
ತಮಿಳುನಾಡು ವಿಧಾನಸಭೆ ಚುನಾವಣೆ 2026ರಲ್ಲಿ ನಡೆಯಲಿದ್ದು, ಇದಕ್ಕಾಗಿ ಎಐಎಡಿಎಂಕೆ, ಬಿಜೆಪಿ ಮತ್ತೆ ಮೈತ್ರಿಮಾಡಿಕೊಂಡಿವೆ. ಬಿಜೆಪಿ ಅಧ್ಯಕ್ಷರಾಗಿದ್ದ ಕೆ.ಅಣ್ಣಾಮಲೈ ಅವರನ್ನು ಬದಲಾವಣೆ ಮಾಡಿ, ರಾಜ್ಯದ ನೂತನ ಅಧ್ಯಕ್ಷರಾಗಿ ನೈನಾರ್ ನಾಗೇಂದ್ರನ್ ನೇಮಕ ಮಾಡಲಾಗಿದೆ. ಆದ್ದರಿಂದ ಕೆ.ಅಣ್ಣಾಮಲೈಗೆ ರಾಜ್ಯಸಭೆ ಟಿಕೆಟ್ ನೀಡಲಾಗುತ್ತದೆ ಎಂಬ ಸುದ್ದಿ ಹಬ್ಬಿತ್ತು.