ಮಂಗಳೂರು:- ಜಿಲ್ಲೆಯ ಪಾಂಗಾಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ತನ್ನ ವಿಡಿಯೊ ಮೂಲಕ ಮತ್ತೆ ಮುನ್ನೆಲೆಗೆ ತಂದ ಯುಟ್ಯೂಬರ್ ಸಮೀರ್ ಪ್ರಕರಣದ ಕುರಿತು ಜನರಿಗಿದ್ದ ಅಭಿಪ್ರಾಯವನ್ನೇ ಸಂಪೂರ್ಣವಾಗಿ ಬದಲಿಸಿಬಿಟ್ಟಿದ್ದರು. ಅಲ್ಲದೇ ಧರ್ಮಸ್ಥಳದಲ್ಲಿ ಕೇವಲ ಸೌಜನ್ಯ ಮಾತ್ರವಲ್ಲ, ಅದೇ ರೀತಿ ಇನ್ನೂ ಹತ್ತಾರು ಕೊಲೆಗಳು ನಡೆದಿವೆ ಎಂದು ಸಮೀರ್ ತಮ್ಮ ಆ ವಿಡಿಯೊದಲ್ಲಿ ವಿವರಿಸಿದ್ದರು.
ಸದ್ಯ ಧರ್ಮಸ್ಥಳದಲ್ಲಿ ನಡೆದ ಕೊಲೆಗಳ ಹೆಣಗಳನ್ನು ಹೂತಿಟ್ಟಿದ್ದ ವ್ಯಕ್ತಿ ಹೆಣಗಳನ್ನು ತೋರಿಸಲು ಮುಂದಾಗಿದ್ದು, ಈ ಸಮಯದಲ್ಲಿ ಸಮೀರ್ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸದೊಂದು ವಿಡಿಯೊವನ್ನು ಹಾಕಿದ್ದು, ಅನನ್ಯ ಭಟ್ ನಾಪತ್ತೆಯಾದ ಕಥೆ ಬಿಚ್ಚಿಟ್ಟಿದ್ದಾರೆ.
ಮಣಿಪಾಲ್ ಮೆಡಿಕಲ್ ಕಾಲೇಜಿನಲ್ಲಿ ಮೊದಲ ವರ್ಷದ ಎಂಬಿಬಿಎಸ್ ಮಾಡುತ್ತಿದ್ದ ಅನನ್ಯ ಭಟ್ ತನ್ನ ಸ್ನೇಹಿತೆಯರ ಜೊತೆ ಧರ್ಮಸ್ಥಳ ಪ್ರವಾಸ ಮಾಡುತ್ತಾಳೆ. ದೇವಸ್ಥಾನದ ದರ್ಶನ ಮುಗಿಸಿ ಅನನ್ಯ ಭಟ್‌ಗಳ ಹಾಸ್ಟೆಲ್ ಸ್ನೇಹಿತೆಯರು ಆಕೆಗೆ ಇಲ್ಲೇ ಇರುವಂತೆ ತಿಳಿಸಿ ತಾವು ಮನೆಗೆ ತೆರಳಿ ಬಟ್ಟೆ ಎತ್ತಿಕೊಂಡು ಬರುವುದಾಗಿ ಹೇಳಿದ್ದರು. ಹೀಗೆ ಬಟ್ಟೆ ತರಲು ಹೋದ ಸ್ನೇಹಿತೆಯರು ವಾಪಸ್ ಬಂದು ಅನನ್ಯ ಭಟ್ ಇಲ್ಲದ್ದನ್ನು ಕಂಡು ದೇವಸ್ಥಾನವನ್ನೆಲ್ಲ ಹುಡುಕಿ ಸಾಕಾಗಿ ಕೊನೆಗೆ ಅನನ್ಯ ಭಟ್ ತಾಯಿ ಸುಜಾತಾ ಅವರಿಗೆ ಕರೆ ಮಾಡಿ ವಿಷಯ ತಿಳಿಸುತ್ತಾರೆ.
ಅತ್ತ ಕೊಲ್ಕತ್ತಾದಲ್ಲಿ ಕೆಲಸ ಮಾಡುತ್ತಿದ್ದ ಸುಜಾತಾ ಅಲ್ಲಿಂದ ಧರ್ಮಸ್ಥಳಕ್ಕೆ ಬರಲು ಎರಡು ದಿನ ಸಮಯವಾಗುತ್ತದೆ. ಧರ್ಮಸ್ಥಳಕ್ಕೆ ಬಂದು ಹುಡುಕಾಟ ನಡೆಸಿ ಮಗಳು ಸಿಗದಿದ್ದಾಗ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮುಂದಾಗುತ್ತಾರೆ. ಆದರೆ, ಪೊಲೀಸರು ನಿನ್ನ ಮಗಳು ಹೇಗೆ ಕಾಣೆಯಾಗಿದ್ದಾಳೋ ಹಾಗೆಯೇ ನೀನು ಕಾಣೆಯಾಗ್ತೀಯ ಇಲ್ಲಿಂದ ಹೊರಟರೆ ಸರಿ ಎಂದು ದೂರು ಪಡೆಯದೇ ಬೆದರಿಸಿ ಕಳುಹಿಸುತ್ತಾರೆ ಎಂದು ಸಮೀರ್ ವಿವರಿಸಿದ್ದಾರೆ.
ಇನ್ನು ಮಗಳು ಕಾಣೆಯಾಗಿದ್ದು ದೇವಸ್ಥಾನದಲ್ಲಿ, ಹೀಗಾಗಿ ಧರ್ಮಾಧಿಕಾರಿಗಳನ್ನು ಕೇಳೋಣ ಎಂದು ಹೋದಾಗ ಅವರು ಹಲ್ಲೆ ನಡೆಸಿ ಅನನ್ಯ ಭಟ್ ತಾಯಿ ಸುಜಾತಾ ಮೂರು ತಿಂಗಳು ಕೋಮಾಗೆ ಹೋಗಿಬಿಡುತ್ತಾರೆ. ಇದರ ಕುರಿತು ಯುನೈಟೆಡ್ ಮೀಡಿಯಾದಲ್ಲಿ ಸುಜಾತ ಅವರ ಸಂದರ್ಶನವನ್ನೂ ಸಹ ಮಾಡಲಾಗಿದೆ ಎಂದು ಸಮೀರ್ ತಮ್ಮ ಈ ವಿಡಿಯೊದಲ್ಲಿ ತಿಳಿಸಿದ್ದಾರೆ.