ಚಿಕ್ಕಮಗಳೂರು:- ಕರ್ನಾಟಕದಾದ್ಯಂತ ಮುಂಗಾರು ಮಳೆ ಮತ್ತೆ ಜೋರಾಗಿ ಅಬ್ಬರಿಸಲು ಸಜ್ಜಾಗಿದೆ. ಅರಬ್ಬಿ ಸಮುದ್ರ ಹಾಗೂ ದಕ್ಷಿಣ ಭಾರತದ ಭೂಮಿ ಮೇಲ್ಮೈನಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಪ್ರಭಾವದಿಂದಾಗಿ ಮುಂಗಾರು ಮಳೆ ಕರ್ನಾಟಕದಲ್ಲೂ ಹೆಚ್ಚು ಸಕ್ರಿಯವಾಗಿದೆ.
ಮುಂದಿನ ಏಳು ದಿನಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಬ್ಬರಿಸಲಿದ್ದು, ಹವಾಮಾನ ಇಲಾಖೆ ”ಆರೆಂಜ್” ಮತ್ತು ”ಯೆಲ್ಲೋ ಅಲರ್ಟ್” ನೀಡಿದೆ.
ಮಲೆನಾಡಿನ ಎರಡು ಜಿಲ್ಲೆಗಳು ಸೇರಿದಂತೆ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಇಂದಿನಿಂದ ಮುಂದಿನ 07 ದಿನ ಜುಲೈ 21ರವರೆಗೆ ಭಾರೀ ಪ್ರಮಾಣದಲ್ಲಿ ಮಳೆ ಸುರಿಯಲಿದೆ. ಈಗಾಗಲೇ ಮಲೆನಾಡಿನಲ್ಲಿ ಮಳೆ ಬಿಟ್ಟು ಬಿಡದೇ ಸುರಿಯುತ್ತಿದೆ. ಕರಾವಳಿ ಹಾಗೂ ಕೆಲವು ಒಳನಾಡು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗುತ್ತಿದೆ. ಗಾಳಿಯ ವೇಗ ಹೆಚ್ಚಾಗಿದೆ. ಬೆಂಗಳೂರು ಸೇರಿದಂತೆ ನಾನಾ ಜಿಲ್ಲೆಗಳಲ್ಲಿ ತಂಪು ವಾತಾವರಣ ದಾಖಲಾಗಿದೆ. ಇನ್ನೂ ಕೆಲವು ದಿನಗಳ ಕಾಲ ಇದೇ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆಯ (IMD) ಬೆಂಗಳೂರು ಕೇಂದ್ರವು ಮುನ್ಸೂಚನೆ ನೀಡಿದೆ.
ಐಎಂಡಿ ಪ್ರಕಾರ, ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದಿನಿಂದ 21ರವರೆಗೆ ಕನಿಷ್ಠ 115 ಮಿಲಿ ಮೀಟರ್‌ನಿಂದ 200 ಮಿಲಿ ಮೀಟರ್‌ವರೆಗೆ ಭಾರೀ ಅತೀ ಭಾರಿ ಮಳೆ ಆಗುವ ನಿರೀಕ್ಷೆ ಇದೆ. ಹೀಗಾಗಿ ಅವಧಿಯಲ್ಲಿ ಆ ಎಲ್ಲ ಜಿಲ್ಲೆಗಳಿಗೆ ‘ಆರೆಂಜ್’ ಅಲರ್ಟ್ ಘೋಷಿಸಲಾಗಿದೆ. ನಾಳೆ ಮಾತ್ರ ‘ಯೆಲ್ಲೋ’ ಅಲರ್ಟ್ ನೀಡಲಾಗಿದೆ.
ಮುಂಗಾರು ಆರಂಭವಾಗದಾಗಿನಿಂದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಹಾಸನ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಆಗುತ್ತಿದೆ. ಇದೇ ಮಳೆ ಮುಂದುವರಿಯಲಿದೆ. ಚಿಕ್ಕಮಗಳೂರು ಮತ್ತು ಕೊಡಗಿಗೆ ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗುವ ಕಾರಣಕ್ಕೆ ಜುಲೈ 19ರಂದು ‘ಆರೆಂಜ್’ ಅಲರ್ಟ್ ನೀಡಲಾಗಿದೆ. ಉಳಿದ ಆರು ದಿನಗಳ ಕಾಲ ‘ಯೆಲ್ಲೋ’ ಅಲರ್ಟ್ ಕೊಡಲಾಗಿದೆ.
ತಲಕಾವೇರಿ, ಬಾಗಮಂಡಲ, ಸೋಮಾರಪೇಟೆ, ಮಡಿಕೇರಿ, ತೀರ್ಥಹಳ್ಳಿ, ಸಿದ್ಧಾಪುರ, ಸಾಗರ, ಜೋಗ ಜಲಪಾತ ಸೇರಿದಂತೆ ಪಶ್ಚಿಮ ಘಟ್ಟಗಳ ಸಾಲಿನ ಊರುಗಳಲ್ಲಿ ಮಳೆ ನಿಲ್ಲುತ್ತಿಲ್ಲ. ಶಾಲೆಗಳಿಗೆ ಆಗಾಗ ರಜೆ ನೀಡಲಾಗುತ್ತಿದೆ.
ಕರಾವಳಿ ಮತ್ತು ಮಲೆನಾಡು ಹೊರತುಪಡಿಸಿದರೆ, ಒಳನಾಡು ಜಿಲ್ಲೆಗಳಾದ ಹಾವೇರಿ, ಗದಗ, ಬೆಳಗಾವಿ, ಧಾರವಾಡ, ವಿಜಯಪುರ, ಬಾಗಲಕೋಟೆ, ಕೊಪ್ಪಳ ಹಾಗೂ ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ರಾಮನಗರ, ಚಾಮರಾಜನಗರ, ತುಮಕೂರು, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ವಿಜಯನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಆಗಾಗ ಜಿಟಿ ಜಿಟಿ ಮಳೆ ದಾಖಲಾಗಿದೆ. ಮಳೆಯಿಂದಾಗಿ ಬಿಸಿಲಿನ ತಾಪ ಕಡಿಮೆ ಆಗಿದೆ ಎಂದು ಐಎಂಡಿ ವರದಿ ತಿಳಿಸಿವೆ.