ಬೆಂಗಳೂರು

ಇಂದಿರಾ ಗಾಂಧಿ ಒತ್ತಡಗಳನ್ನು ಎದುರಿಸಿ ಬಾಂಗ್ಲಾ ನರಮೇಧವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದರು.- ಬಿಕೆಹೆಚ್

ಬೆಂಗಳೂರು:- ಶ್ರೀಮತಿ ಇಂದಿರಾ ಗಾಂಧಿಯವರಿಗೆ ಇರುವ ಧೈರ್ಯದಲ್ಲಿ ಶೇಕಡಾ ಒಂದರಷ್ಟು ಪ್ರಧಾನಿ ಮೋದಿ ಪ್ರದರ್ಶನ ಮಾಡಲಿಲ್ಲ, ಜೊತೆಗೆ ವಿದೇಶಾಂಗ ನೀತಿ ಭಾರತವನ್ನು ಏಕಾಂಗಿಯಾಗಿ ನಿಲ್ಲುವಂತೆ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಬಿ.ಕೆ‌ ಹರಿಪ್ರಸಾದ್ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1971ರಲ್ಲಿ ಯುದ್ಧ ಘೋಷಣೆಯಾದಾಗ ಇಂದಿರಾ ಗಾಂಧಿ ಎಷ್ಟೆಲ್ಲ ಒತ್ತಡಗಳನ್ನು ಎದುರಿಸಿ ಬಾಂಗ್ಲಾ ನರಮೇಧವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದರು ಎಂದರು. ಭಾರತ-ಪಾಕ್‌ ನಡುವಿನ ಸಮಸ್ಯೆ ವಿಚಾರದಲ್ಲಿ ಅಮೆರಿಕದ ಅಧ್ಯಕ್ಷರು ಡಿಕ್ಟೇಟ್‌ ಮಾಡುವುದು ಬೇಕಿರಲಿಲ್ಲ ಎಂದ ಹರಿಪ್ರಸಾದ್‌, ಮೋದಿ ಅವರು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಭಾಷಣ ಮಾಡಿದ್ದಾರೆ ಎಂದು ಟೀಕಿಸಿದರು.

ಪಹಲ್ಗಾಮ್‌ ಉಗ್ರರ ದಾಳಿ ಅನಂತರ ಹಲವಾರು ಪ್ರಶ್ನೆಗಳು ಕೇಳಿಬರುತ್ತಿವೆ, ಅದಾವುದಕ್ಕೂ ಮೋದಿ ಉತ್ತರ ನೀಡುತ್ತಿಲ್ಲ. ಉಗ್ರರ ತಾಣದ ಮೇಲೆ ದಾಳಿಯಾದಾಗ ಮೋದಿ ಎಲ್ಲಿದ್ದರು ಅಂತ ಗೊತ್ತಿಲ್ಲ. ಕದನ ವಿರಾಮ ತಾನೇ ಮಾಡಿದ್ದು ಅಂತ ಅಮೆರಿಕ ಅಧ್ಯಕ್ಷ ಟ್ರಂಪ್‌ ಹೇಳಿಕೊಂಡಿದ್ದಾರೆ. ಅದರ ಬಗ್ಗೆ ಮೋದಿ ಮಾತನಾಡಿಲ್ಲ, ಈ ಮೊದಲು ಭಾರತ ಯಾರ ಮುಂದೆಯೂ ತಲೆತಗ್ಗಿಸಿರಲಿಲ್ಲ. ಆದರೆ, ಈಗ ತಲೆತಗ್ಗಿಸುವಂತಾಗಿದೆ. ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿದ್ದಾರೆ.