ಬೆಳಗಾವಿ:- ರಾಜ್ಯದಲ್ಲಿ ಮುಂಗಾರು ಮತ್ತೆ ಚುರುಕುಗೊಂಡಿದ್ದು 10 ನದಿಗಳಲ್ಲಿ ಮತ್ತೆ ನೆರೆ ಭೀತಿ ಆವರಿಸಿದೆ. ಜಲಾಶಯಗಳ ಮಟ್ಟವೂ ಏರಿಕೆಯಾಗಿ ಭರ್ತಿ ಹಂತ ತಲುಪಿವೆ. ಜಿಲ್ಲೆಯ ಬೆಳಗಾವಿ, ಖಾನಾಪುರ, ಹಾಸನ ಜಿಲ್ಲೆಯ ಸಕಲೇಶಪುರ, ಉತ್ತರ ಕನ್ನಡದ ದಾಂಡೇಲಿ ತಾಲೂಕಿನಲ್ಲಿ ಇಂದು ಶಾಲಾ-ಕಾಲೇಜಿಗೆ ರಜೆ ಘೋಷಿಸಲಾಗಿದೆ.
ಧಾರಾಕಾರ ಮಳೆಗೆ ಕೃಷ್ಣಾ, ದೂಧಗಂಗಾ, ವೇದಗಂಗಾ, ಘಟಪ್ರಭಾ, ಹಿರಣ್ಯಕೇಶಿ, ಮಲಪ್ರಭಾ, ಮಾರ್ಕಂಡೇಯ ನದಿಗಳು ತುಂಬಿ ಹರಿಯುತ್ತಿವೆ. ಹಿಡಕಲ್, ಮಲಪ್ರಭಾ ಜಲಾಶಯಗಳಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರಲಾರಂಭಿಸಿದೆ. ಆಲಮಟ್ಟಿ ಡ್ಯಾಂಗೆ ಭರ್ತಿಗೆ 3 ಮೀಟರ್ ಮಾತ್ರ ಬಾಕಿ ಇದೆ. ಮಲೆನಾಡಿನಲ್ಲೂ ಮಳೆ ಜೋರಾಗಿದ್ದು ತುಂಗಾ, ಭದ್ರಾ, ಹೇಮಾವತಿ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ.
ಶಿವಮೊಗ್ಗ-ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169ರ ರಸ್ತೆ ಬದಿ ಧರೆ ಕುಸಿದು ಸಂಚಾರ ಬಂದ್ ಆತಂಕ ಎದುರಾಗಿದೆ. ಕಾರವಾರದಲ್ಲಿ ಭಾರೀ ಗಾಳಿಗೆ ಮಳೆಗೆ ಸಮುದ್ರ ಉಕ್ಕೇರಿದೆ. ಸಕಲೇಶಪುರ ತಾಲೂಕಿನ ಆನೆಮಹಲ್ ದೋಣಿಗಾಲ್ ಬಳಿ ರಾ.ಹೆದ್ದಾರಿ 75ರಲ್ಲಿ 100 ಮೀ.ಉದ್ದದ ಗೇಬಿಯನ್ ವಾಲ್ ಕೊಚ್ಚಿ ಹೋಗಿದೆ. ಶಿರಾಡಿ ಘಾಟ್‌ನ ಹಲವಡೆ ಭೂಕುಸಿತದ ಭೀತಿ ಎದುರಾಗಿದೆ.
ನಿರಂತರ ಮಳೆಗೆ ಸಕಲೇಶಪುರ ತಾಲೂಕಿನ ಆನೆಮಹಲ್ ದೋಣಿಗಾಲ್ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸುಮಾರು 100 ಮೀಟರ್ ಉದ್ದದ ಗೇಬಿಯನ್ ವಾಲ್ ಕೊಚ್ಚಿ ಹೋಗಿದೆ. ರಸ್ತೆ ಸುರಕ್ಷತೆಗಾಗಿ ಕಳೆದ ವರ್ಷ ಇದನ್ನು ನಿರ್ಮಿಸಲಾಗಿದ್ದು ಇದೀಗ ಭಾರಿ ಮಳೆಗೆ ಕೊಚ್ಚಿ ಹೋಗುತ್ತಿರುವುದು ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿ ಇದು ಸಾಕ್ಷಿ ಸಾಕ್ಷಿ ನೀಡಿದೆ.