ಚಿಕ್ಕಮಗಳೂರು:- ರಾಜ್ಯಾದ್ಯಂತ ಈಗ ಮಳೆಯ ಅಬ್ಬರ ಕಂಡುಬರುತ್ತಿದೆ. ಆದರೆ, ಈಗ ಬರುವುದಕ್ಕಿಂತಲೂ ಅಧಿಕ ಮಳೆ ಮುಂದೆ ಕಾದಿದೆ. ಮುಂದಿನ ತಿಂಗಳು ಮಳೆ ಮತ್ತಷ್ಟು ಬಿರುಸಾಗಲಿದೆ ಎಂದು ಹವಾಮಾನ ವರದಿಗಳು ಹೇಳಿವೆ. ಇದೀಗ ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ.
ಹವಾಮಾನ ಇಲಾಖೆ ಬೆಂಗಳೂರು ವಿಭಾಗದ ವಿಜ್ಞಾನಿ ಸಿ.ಸಿ ಪಾಟೀಲ್ ಪ್ರಕಾರ ಮುಂದಿನ ತಿಂಗಳು 10ನೇ ತಾರೀಕಿನಿಂದ ಮಳೆ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ. ಜುಲೈ 24 ರವರೆಗೂ ಭಾರೀ ಮಳೆಯಾಗಲಿದೆ ಎಂದು ಅವರು ಹೇಳಿದ್ದಾರೆ. ಆದರೆ, ಇಂದಿನಿಂದ ಜುಲೈ 10 ರವರೆಗೆ ಮಳೆಯ ಅಬ್ಬರ ಕೊಂಚ ಮಟ್ಟಿಗೆ ತಗ್ಗಲಿದೆ ಎಂದು ಅವರು ಹೇಳಿದ್ದಾರೆ.
ಈ ಬಾರಿ ಮಳೆಯ ಪ್ರಮಾಣ ವಾಡಿಕೆಗಿಂತ ಹೆಚ್ಚಾಗಿರಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿತ್ತು. ಅದರಲ್ಲೂ ವಿಶೇಷವಾಗಿ ಈ ಬಾರಿ ಕರಾವಳಿ ನಗರಗಳಲ್ಲಿ ಭಾರೀ ಮಳೆಯಾಗಿತ್ತು. ಆದರೆ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ ಮಳೆಗಿಂತ ಮೋಡ ಕವಿದ ವಾತಾವರಣವೇ ಹೆಚ್ಚಾಗಿ ಕಂಡುಬರುತ್ತಿದೆ.