ಮಂಗಳೂರು:- ಜಿಲ್ಲೆಯ ಉಳ್ಳಾಲದಲ್ಲಿ ಸುಮಾರು ಐವತ್ತು ಕೋಟಿ ವೆಚ್ಚದಲ್ಲಿ ಹೊಸ ಮಸೀದಿ ನಿರ್ಮಾಣಗೊಳ್ಳಲಿದೆ. ಯೋಜನಾವರದಿ ಸಿದ್ಧಪಡಿಸಲಾಗಿದ್ದು, ಶೀಘ್ರ ನಿರ್ಮಾಣ ಆರಂಭವಾಗಲಿದೆ.
ತಾಜ್ ಮಹಲ್ ಶೈಲಿಯ ಈ ಮಸೀದಿ ನಿರ್ಮಾಣ ಮಾಡಲಿದ್ದು, ಹಾಲಿ ಇರುವ ಮಸೀದಿಯನ್ನು ನೆಲಸಮ ಮಾಡಿ ಹೊಸದಾಗಿ ಕಟ್ಟಲಿದ್ದಾರೆ.
ತಾಜ್ ಮಹಲ್ನಲ್ಲಿರುವಂತೆ ಪ್ರಾಚೀನ ವಾಸ್ತು ಶಿಲ್ಪ ಶೈಲಿಯನ್ನು ನೂತನ ಮಸೀದಿಯಲ್ಲಿ ಬಳಸಲಾಗುತ್ತದೆ. ಈಗಾಗಲೇ ನೀಲ ನಕ್ಷೆಯನ್ನು ದುಬಾೖ, ಗೋವಾ, ಆಂಧ್ರಪ್ರದೇಶ, ಕರ್ನಾಟಕದ ವಾಸ್ತು ಶಿಲ್ಪಿಗಳು ಸಿದ್ಧಪಡಿಸಿದ್ದಾರೆ. 8 ಮಿನಾರ್, 6 ಗುಂಬಜ್, 5 ಕಡೆ ಪ್ರವೇಶ ದ್ವಾರಗಳನ್ನು ಮಸೀದಿ ಒಳಗೊಳ್ಳಲಿದೆ. ನೆಲ ಹಾಗೂ ಮೊದಲ ಮಹಡಿ 14 ಅಡಿ ಎತ್ತರವಿದ್ದು, ಎರಡನೇ ಅಂತಸ್ತು 13 ಅಡಿ ಸೇರಿದಂತೆ ಒಟ್ಟು 40 ಅಡಿ ಎತ್ತರವಿರಲಿದೆ ಎಂದು ಆಡಳಿತ ಸಮಿತಿಯವರು ತಿಳಿಸಿದ್ದಾರೆ. ನೆಲ ಹಾಗೂ ಎರಡು ಅಂತಸ್ತಿನಲ್ಲಿ ಪ್ರಾರ್ಥನೆಗೆ ಜಾಗ ಇರಲಿದೆ. ನೆಲ ಮಹಡಿಯಲ್ಲಿ ಧರ್ಮಗುರುಗಳ ಪ್ರವಚನಕ್ಕೂ ಸ್ಥಳಾವಕಾಶ ಕಲ್ಪಿಸಲಾಗುವುದು.
ಗೋಡೆಗಳಿಗೆ ಪೈಂಟಿಂಗ್ ಬದಲಾಗಿ ಒಳಾಂಗಣ ಹಾಗೂ ಹೊರಾಂಗಣಕ್ಕೆ ಅಮೃತಶಿಲೆಯನ್ನೇ ಬಳಸಲಾಗುವುದು. ರಾಸಾಯನಿಕಗಳಿಲ್ಲದೇ ನೈಸರ್ಗಿಕವಾಗಿ ನಿರ್ಮಿಸಲು ಯೋಜಿಸಲಾಗಿದೆ. ಮಸೀದಿಯ ಮೆರುಗನ್ನು ಮತ್ತಷ್ಟು ಹೆಚ್ಚಿಸಲು ಮುಂಭಾಗದಲ್ಲಿ 40 ಅಡಿ ಅಗಲ, 70 ಅಡಿ ಉದ್ದ ಹಾಗೂ ಒಂದೂವರೆ ಅಡಿ ಆಳದ ಕೊಳ ನಿರ್ಮಿಸಲಾಗುತ್ತದೆ. 1 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿರುವ ಮಸೀದಿಯಲ್ಲಿ ಏಕಕಾಲದಲ್ಲಿ 10 ಸಾವಿರ ಜನ ಪ್ರಾರ್ಥಿಸುವ ಸ್ಥಳಾವಕಾಶ ಇರಲಿದೆ.
ರಾಜಸ್ಥಾನದ ಅಜ್ಮೇರ್ನಲ್ಲಿರುವುದು ದೇಶದಲ್ಲೇ ಅತೀ ದೊಡ್ಡ ದರ್ಗಾ. ದೇಶದ ಪ್ರಧಾನಿಗಳು ಅಧಿಕಾರಕ್ಕೆ ಬಂದಾಕ್ಷಣ ಅಲ್ಲಿಗೆ ಭೇಟಿ ನೀಡುತ್ತಾರೆ ಅಥವಾ ಕಾಣಿಕೆ ನೀಡುತ್ತಾರೆ. ಅದರ ಬಳಿಕ ಎರಡನೇ ಅತೀ ದೊಡ್ಡ ದರ್ಗಾ ಇರುವುದು ಉಳ್ಳಾಲದಲ್ಲಿ. ಐದು ಶತಮಾನಗಳಿಗೂ ಅಧಿಕ ಇತಿಹಾಸ ಹೊಂದಿದ ಉಳ್ಳಾಲ ಮಸೀದಿಯಲ್ಲಿರುವ ಸೈಯದ್ ಮದನಿ ದರ್ಗಾ ದಕ್ಷಿಣ ಭಾರತದ ಅಜ್ಮೇರ್ ಎಂದೇ ಪ್ರಸಿದ್ಧಿ. ಪ್ರತೀ 5 ವರ್ಷಗಳಿಗೊಮ್ಮೆ ಇಲ್ಲಿ ಉರೂಸ್ ನಡೆಯುತ್ತದೆ.
ಈ ಹಿಂದೆ ಅಧ್ಯಕ್ಷರಾಗಿದ್ದ ಇಬ್ರಾಹಿಂರವರ ನಿಧನದ ನಂತರ ಬಡ ಹೆಣ್ಣುಮಕ್ಕಳಿಗೆ ಸುಮಾರು ಐದು ಪವನ್ ಬಂಗಾರ ದರ್ಗಾ ಸಮಿತಿಯಿಂದ ದೊರಕುತ್ತಿತ್ತು. ಆದರೆ, ಈಗ ಪೂರ್ಣವಾಗಿ ನಿಲ್ಲಿಸಿರುವುದು ಬಡ ಕುಟುಂಬಕ್ಕೆ ಕೊಂಚ ನಿರುತ್ಸಾಹ ಇರುವುದು ಕಂಡು ಬರುತ್ತಿದೆ. ಇದನ್ನು ಮುಂದುವರೆಸಿದರೆ ಒಳ್ಳೆಯದಾಗಬಹುದು.