ಮಂಗಳೂರು:- ದ.ಕ ಜಿಲ್ಲೆಯ ಉಳ್ಳಾಲದ ಸೋಮೇಶ್ವರ ಬೀಚ್ ಗೆ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರ ಎಸಗಿದ ಘಟನೆಯೊಂದು ಉಳ್ಳಾಲ ಪೊಲೀಸ್ ಠಾಣೆಯ ಮೆಟ್ಟಿಲೇರಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಬಾಲಕಿಯನ್ನು ಪರಿಚಯಿಸಿಕೊಂಡ ಯುವಕ ಐದು ದಿನದಲ್ಲೇ ಆಕೆಯನ್ನು ಪುಸಲಾಯಿಸಿ ಬೀಚ್ ಗೆ ಕರೆದುಕೊಂಡು ಹೋಗಿದ್ದು, ಕಾರ್ ನಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂಬ ಮಾಹಿತಿ ಹೊರ ಬಿದ್ದಿದೆ.
ಅಡ್ಯಾರ್ ವಳಚ್ಚಿಲ್ ನಿವಾಸಿ ಪೇಂಟಿಂಗ್ ವೃತ್ತಿ ಮಾಡಿಕೊಂಡಿರುವ ಕೆಲ್ವಿನ್(24) ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ. ಪಿಯುಸಿ ಮುಗಿಸಿ ನರ್ಸಿಂಗ್ ಶಿಕ್ಷಣ ಓದಲು ಮುಂದಾಗಿರುವ ಸಂತ್ರಸ್ತೆಯನ್ನು ಜಾಲತಾಣದಲ್ಲಿ ಪರಿಚಯಿಸಿಕೊಂಡಿದ್ದ ಆರೋಪಿ 5 ದಿನದಲ್ಲೇ ಭೇಟಿಯಾಗಲು ಉಳ್ಳಾಲದ ಮನೆಗೆ ಕಾರಿನಲ್ಲಿ ಕರೆದೊಯ್ದ ನಂತರ ಆಕೆಯನ್ನು ಕುತ್ತಾರು ಸಮೀಪದ ಲಾಡ್ಜ್ ಗೆ ಕರೆದುಕೊಂಡು ಹೋಗಿ ರೂಂ ಕೇಳಿದ್ದಾನೆ. ಆದರೆ, ಬಾಲಕಿಯಾಗಿದ್ದ ಕಾರಣ ಲಾಡ್ಜ್ ಸಿಬ್ಬಂದಿ ರೂಂಮ್ ನೀಡಿರಲಿಲ್ಲ. ನಂತರ ಸೋಮೇಶ್ವರ ಕಡಲ ತೀರಕ್ಕೆ ಕರೆದೊಯ್ದು ಕಾರಿನಲ್ಲಿಯೇ ಅತ್ಯಾಚಾರ ಎಸಗಿದ್ದಾನೆ. ನಂತರ ಆಕೆಯನ್ನು ಮನೆಯವರೆಗೂ ತಮ್ಮ ವಾಹನದಲ್ಲಿ ಕರೆದುಕೊಂಡು ಬಂದು ಬಿಟ್ಟು ಹೋಗಿದ್ದಾನೆ. ರಾತ್ರಿ ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಪೋಷಕರು ವೈದ್ಯರ ಬಳಿ ಕರೆದೊಯ್ದು ತೋರಿಸಿದಾಗ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ.