ಚಿಕ್ಕಮಗಳೂರು

ಎನ್.ಆರ್.ಪುರಕ್ಕೆ ಆಪರೇಷನ್ ಸಲಗ ತಂಡ ಆಗಮನ

ಚಿಕ್ಕಮಗಳೂರು:- ಜಿಲ್ಲೆಯ ಶೃಂಗೇರಿ ಕ್ಷೇತ್ರದ ಶಾಸಕರು ಹಾಗೂ ಸರ್ಕಾರದ ನವೀಕರಿಸಬಹುದಾದ ಇಂಧನ ನಿಗಮದ ಅಧ್ಯಕ್ಷರಾಗಿರುವ ಟಿ.ಡಿ ರಾಜೇಗೌಡ ಮತ್ತು ಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಾ. ಕೆ ಪಿ ಅಂಶುಮಂತ್ ಗೌಡ ಅವರ ಮನವಿಯ ಮೇರೆಗೆ ರಾಜ್ಯದ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆರವರು ನರಸಿಂಹರಾಜಪುರ ತಾಲೂಕಿನ ಮಡಬೂರು ಗ್ರಾಮದ ಕುಪ್ಪೂರಿನಲ್ಲಿ ನಿರಂತರ ರೈತರ ತೋಟಗಳಿಗೆ ದಾಳಿ ಮಾಡಿ ಹಾನಿ ಮಾಡುತ್ತಿರುವ ಒಂಟಿ ಸಲಗವನ್ನು ಶೀಘ್ರವಾಗಿ ಹಿಡಿದು ಸ್ಥಳಾಂತರಿಸುವಂತೆ ಆದೇಶ ಮಾಡಿದ ಹಿನ್ನೆಲೆ ಭಾನುವಾರ ಸಂಜೆ 5:00 ಗಂಟೆಯ ಸುಮಾರಿಗೆ ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಂಧಿಗ್ರಾಮಕ್ಕೆ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲಿನ ನಾಲ್ಕು ಆನೆಗಳು ಆಗಮಿಸಿವೆ.

ಕಳೆದ ಆರು-ಏಳು ತಿಂಗಳುಗಳಿಂದ ನರಸಿಂಹರಾಜಪುರದ ತಾಲೂಕಿನ ಸುತ್ತಮುತ್ತ ಆನೆ ಹಾವಳಿ ವಿಪರೀತವಾಗಿದ್ದು, ಈಗಾಗಲೇ ಐದು ಜನರನ್ನು ಆನೆ ಕೊಂದು ಹಾಕಿದ್ದು, ಅಪಾರ ಪ್ರಮಾಣದಲ್ಲಿ ರೈತರ ಅಡಿಕೆ ತೋಟ, ತೆಂಗು, ಬಾಳೆ, ಭತ್ತ, ಕಾಫಿ ತೋಟಗಳಿಗೆ ನಷ್ಟ ಉಂಟು ಮಾಡಿದೆ. ಇದರಿಂದ ಈ ಭಾಗದ ರೈತರು ಅರಣ್ಯ ಇಲಾಖೆಯ ಮೇಲೆ ತೀವ್ರ ಆಕೋಶ ವ್ಯಕ್ತಪಡಿಸಿದ್ದರು. ಸರ್ಕಾರದ ಮೇಲೂ ಕೂಡ ಕಿಡಿಕಾರಿದರು. ಇತ್ತೀಚೆಗೆ ಬಾಳೆಹೊನ್ನೂರಿನ ಅಂಡ್ವಾನೆಯಲ್ಲಿ ಇತ್ತೀಚಿಗೆ ಸುಬ್ಬೆಗೌಡರ ಸಾವಿಗೆ ಕಾರಣವಾದ ಆನೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.

ಮಡಬೂರಿನ ಕುಪ್ಪೂರಿನ ಬಳಿ ರೈತರ ತೋಟಗಳಿಗೆ ನಿರಂತರವಾಗಿ ದಾಳಿ ಮಾಡುತ್ತಿರುವ ಒಂಟಿ ಸಲಗವನ್ನು ಹಿಡಿಯಲು ಭಾನುವಾರದಂದು ಸಕ್ರೆಬೈಲಿನ ನಾಲ್ಕು ಆನೆಗಳ ತಂಡ ಗಾಂಧಿಗ್ರಾಮಕ್ಕೆ ಆಗಮಿಸಿದ್ದು, ಇನ್ನೊಂದು ಮಡಿಕೇರಿಯಿಂದ ತಂಡ ಬರಲಿದ್ದು, ಈ ಕಾರ್ಯಾಚರಣೆಯಲ್ಲಿ ಏಳು ಆನೆಗಳು ಭಾಗವಹಿಸಲಿವೆ.

ಇಂದು ಕಾರ್ಯಾಚರಣೆಗೆ ಇಳಿಯುವ ಅರಣ್ಯ ಇಲಾಖೆಯು ಆನೆ ಇರುವ ಸ್ಥಳ ಗುರುತಿಸಿ ಕಾರ್ಯಾಚರಣೆಯನ್ನು ಮುಂದುವರಿಸಲಿದ್ದಾರೆ, ಕಾರ್ಯಾಚರಣೆ ಯಶಸ್ವಿಯಾಗಲಿ ಹಾಗೂ ಒಂಟಿ ಸಲಗವನ್ನು ಶೀಘ್ರ ಹಿಡಿದು ಸ್ಥಳಾಂತರಿಸಲಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಅರಣ್ಯ ಇಲಾಖೆಯ ಈ ಕಾರ್ಯಕ್ಕೆ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರನ್ನು ಗ್ರಾಮಸ್ಥರು ಅಭಿನಂದಿಸಿದ್ದಾರೆ. ಆನೆ ಕಾರ್ಯಾಚರಣೆ ತಂಡ ಹಾಗೂ ಐವತ್ತಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

ಇದೇ ಸಂದರ್ಭದಲ್ಲಿ ಭಾನುವಾರ ಸಂಜೆ ಗಾಂಧಿ ಗ್ರಾಮಕ್ಕೆ ಭೇಟಿ ನೀಡಿದ ಮಾಜಿ ಸಚಿವರಾದ ಡಿ.ಎನ್ ಜಿವರಾಜ್ ರವರು ಉಪ ಅರಣ್ಯ ಸಂರಕ್ಷಣಾಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರವಾಗಿ ರೈತರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸಿ ಕೊಡುವಂತೆ ಹಾಗೂ ರೈತರ ತೋಟ ಜಮೀನುಗಳನ್ನು ಆನೆಯಿಂದ ರಕ್ಷಿಸಲು ರೈಲ್ವೆ ಬ್ಯಾರಿಕೇಡ್ ನಂತಹ ತಡೆಗೋಡೆಗಳನ್ನು ನಿರ್ಮಾಣ ಮಾಡಿಸುವಂತೆ ಸರ್ಕಾರದ ಮೇಲೆ ಒತ್ತಡ ತರುವಂತೆ ಹೇಳಿದರಲ್ಲದೆ ಈ ಬಗ್ಗೆ ಕೇಂದ್ರ ಸರ್ಕಾರದ ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡುವುದಾಗಿಯೂ ಅವರು ಹೇಳಿದರು.

ಭದ್ರಾ ಅಚ್ಚುಕಟ್ಟು ಪ್ರಾಧಿಕಾರ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಾ. ಕೆ ಪಿ ಅಂಶುಮಂತ್ ರವರು ಗಾಂಧಿ ಗ್ರಾಮಕ್ಕೆ ಆಗಮಿಸಿ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಹಾಗೂ ಸಿಬ್ಬಂದಿಯವರೊಂದಿಗೆ ಧೈರ್ಯ ತುಂಬುವ ಕೆಲಸ ಮಾಡಿದರು ಹಾಗೂ ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ಇಲಾಖೆಗೆ ಅಧಿಕಾರಿಗಳಿಗೆ ಭರವಸೆ ನೀಡಿದರು. ಸ್ಥಳದಲ್ಲಿದ್ದ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿ, ಇಲಾಖೆಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಆನೆ ಒಂಟಿ ಸಲಗವನ್ನು ಹಿಡಿಯುವ ನಿಟ್ಟಿನಲ್ಲಿ ಎಲ್ಲ ರೀತಿಯ ಸಹಕಾರವನ್ನು ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನ ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಮುಖಂಡರುಗಳು ಆಗಮಿಸಿದ್ದರು. ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಅರಣ್ಯ ಇಲಾಖೆಯ ಅಧಿಕಾರಿ ಸಿಬ್ಬಂದಿ ವರ್ಗದವರಿಗೆ ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷರಾದ ಗಾಂಧಿ ಗ್ರಾಮದ ಕೆ.ಎನ್ ನಾಗರಾಜ್ ರವರು ಎಲ್ಲ ರೀತಿಯ ಸಹಕಾರವನ್ನು ನೀಡಿ ಈ ಕಾರ್ಯಾಚರಣೆ ಯಶಸ್ವಿಯಾಗುವಂತೆ ಶುಭ ಹಾರೈಸಿದ್ದಾರೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video