ದಕ್ಷಿಣ ಕನ್ನಡ

ಎಸ್ಐಟಿ: ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳುತ್ತದೆ.!

ಮಂಗಳೂರು:- ಧರ್ಮಸ್ಥಳ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಅಪರಾಧಗಳ ಕುರಿತ ತನಿಖೆಯನ್ನು ಚುರುಕುಗೊಳಿಸಿರುವ ಎಸ್‌‍ಐಟಿ ಅಧಿಕಾರಿಗಳು ಅನಾಮಧೇಯ ದೂರುದಾರನನ್ನು ಇಂದು ಸ್ಥಳಕ್ಕೆ ಕರೆದೊಯ್ಯುವ ಸಾಧ್ಯತೆಗಳಿವೆ. ರಾಜ್ಯದ ಆಂತರಿಕ ಭದ್ರತಾ ವಿಭಾಗದ ಪೊಲೀಸ್‌‍ ಮಹಾನಿರ್ದೇಶಕ ಪ್ರಣವ್‌ ಮೊಹಾಂತಿ ರಚಿಸಲಾಗಿರುವ ವಿಶೇಷ ತನಿಖಾ ದಳ, ಕಳೆದ ಮೂರು ದಿನಗಳಿಂದಲೂ ಮಂಗಳೂರಿನಲ್ಲಿ ಬೀಡುಬಿಟ್ಟಿದ್ದು, ವಿಚಾರಣೆ ನಡೆಸುತ್ತಿದೆ.

ಡಿಐಜಿ ಎಂ.ಎನ್‌.ಅನುಚೇತ್‌ ಅವರ ನೇತೃತ್ವದ ತಂಡ ದೂರುದಾರ ಅನಾಮಿಕ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿದ್ದು ಸುಮಾರು 15 ಗಂಟೆಗಳ ಕಾಲ ಮಾಹಿತಿ ಕಲೆ ಹಾಕಿದೆ. ಆತ ಗುಂಡಿ ಅಗೆದು ಹೊರತೆಗೆದಿದ್ದೇನೆ ಎಂದು ಹೇಳಿಕೊಂಡಿರುವ ತಲೆ ಬುರುಡೆ ಪತ್ತೆಯಾದ ಸ್ಥಳವನ್ನು ಇಂದು ಮಹಜರು ನಡೆಸುವ ಸಾಧ್ಯತೆ ಇದೆ.

ಇಂದು ಬೆಳಗ್ಗೆಯಿಂದಲೂ ಎಸ್‌‍ಐಟಿ ಕಚೇರಿಯಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆಗಳ ಅಧಿಕಾರಿಗಳು ಬೀಡು ಬಿಟ್ಟಿದ್ದರು. ಇದು ತನಿಖೆಯ ಮತ್ತಷ್ಟು ಪ್ರಗತಿಯ ಮುನ್ಸೂಚನೆ ನೀಡಿತ್ತು.
ಧರ್ಮಸ್ಥಳ ಭಾಗದ ಅರಣ್ಯ ಪ್ರದೇಶಗಳಲ್ಲಿ ಅತ್ಯಾಚಾರಕ್ಕೊಳಕ್ಕಾಗಿ ಕೊಲೆಯಾದ ಹಲವಾರು ಶವಗಳನ್ನು ಹೂತಿಟ್ಟಿರುವುದಾಗಿ ಅನಾಮಧೇಯ ವ್ಯಕ್ತಿ ಹೇಳಿಕೆ ನೀಡಿದ್ದಾನೆ. ಆತನನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ಎಲ್ಲೆಲ್ಲಿ ಶವಗಳನ್ನು ಹೂತಿಡಲಾಗಿದೆ ಎಂದು ಗುರುತಿಸುವ ಸಾಧ್ಯತೆಯಿದೆ. ಅದಕ್ಕಾಗಿ ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳನ್ನು ಎಸ್‌‍ಐಟಿ ಕರೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಅಂತ್ಯಸಂಸ್ಕಾರ ನಡೆಸಿದ ಜಾಗವನ್ನು ಉತ್ಖನನ ಮಾಡಿ, ಕಳೇ ಬರಗಳನ್ನು ಸಂಗ್ರಹಿಸಲು ಜಿಲ್ಲಾ ಮ್ಯಾಜಿಸ್ಟ್ರೇಟ್‌ರೂ ಆಗಿರುವ ಜಿಲ್ಲಾಧಿಕಾರಿಗಳ ಪೂರ್ವಾನುಮತಿ ಹಾಗೂ ತಾಲ್ಲೂಕು ಮ್ಯಾಜಿಸ್ಟ್ರೇಟ ಉಪಸ್ಥಿತಿ ಅಗತ್ಯವಿದೆ. ಇದು ಅತ್ಯಂತ ಸೂಕ್ಷ್ಮ ಪ್ರಕರಣವಾಗಿರುವ ಕಾರಣಕ್ಕೆ ನ್ಯಾಯಾಲಯಗಳ ನಿರ್ದೇಶನಗಳನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ.

ಮೊದಲು ದೂರುದಾರನನ್ನು ಸ್ಥಳಕ್ಕೆ ಕರೆದು ಮ್ಯಾಜಿಸ್ಟ್ರೇಟ್ ಹೇಳುವ ಜಾಗಗಳನ್ನು ಗುರುತಿಸಿ, ನಂತರ ಪೂರ್ವಾನುಮತಿಗಳೊಂದಿಗೆ ಕಾನೂನು ಬದ್ಧವಾಗಿ ಉತ್ಖನನ ನಡೆಸಲು ಎಸ್‌‍ಐಟಿ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.

ಒಂದು ವೇಳೆ ಆತ ಹೇಳಿದ ಸ್ಥಳಗಳಲ್ಲಿ ಶವಗಳ ಕಳೇಬರಳು ಪತ್ತೆಯಾದರೆ, ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳುತ್ತದೆ. ಮುಂದಿನ ತನಿಖೆ ಮತ್ತಷ್ಟು ಸವಾಲಾಗಿರುತ್ತದೆ. ಈವರೆಗೂ ಅನಾಮಧೇಯ ದೂರುದಾರನಿಂದ ಸಂಪೂರ್ಣ ಪ್ರಾಥಮಿಕ ಮಾಹಿತಿಗಳನ್ನು ಕಲೆ ಹಾಕಿರುವ ಎಸ್‌‍ಐಟಿ ಅಧಿಕಾರಿಗಳು ಮುಂದಿನ ಹಂತದ ವಿಚಾರಣೆಯನ್ನು ತೀವ್ರಗೊಳಿಸಲು ಮುಂದಾಗಿದ್ದಾರೆ.

ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಸಮೀಪವಿರುವ ದಟ್ಟ ಅರಣ್ಯದ ನಡುವೆ ಎಸ್.ಐ.ಟಿ ತಂಡದ ಅಧಿಕಾರಿಗಳು ದೂರುದಾರನ್ನನ್ನು ಕರೆದೊಯ್ದು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ. ಮಧ್ಯಾಹ್ನದ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟಕ್ಕೆ ದೂರುದಾರನನ್ನು ಕರೆತಂದರು. ಸ್ನಾನಘಟ್ಟದ ಸಮೀಪವೇ ಒಂದು ಸ್ಥಳವನ್ನು ಆತ ತೋರಿಸಿದ್ದು, ಅದನ್ನು ಗುರುತಿಸಿದ ಬಳಿಕ ಇದೀಗ ದಟ್ಟ ಅರಣ್ಯದಲ್ಲಿ ಕಳೆದ ಸುಮಾರು ಒಂದು ಗಂಟೆಯದ ಪರಿಶೀಲನಾ ಕಾರ್ಯ ನಡೆಯುತ್ತಿದೆ.

ಈ ಕಾಡಿನ ಒಳಗೆ ಆತ ಹಲವಾರು ಮೃತದೇಹಗಳನ್ನು ಹೂತು ಹಾಕಿರುವ ಅನುಮಾನವಿದ್ದು, ಇಲ್ಲಿ ಅಧಿಕಾರಿಗಳು ಅದನ್ನು ಗುರುತಿಸುವ ಕಾರ್ಯ ಮಾಡುತ್ತಿದ್ದಾರೆ. ಇಲ್ಲಿನ ಸ್ಥಳ ಪರಿಶೀಲನೆ ಇನ್ನಷ್ಟು ಹೊತ್ತು ಮುಂದುವರಿಯುವ ನಿರೀಕ್ಷೆಯಿದೆ.

ಈತ ಇಂದು ನೀಡುವ ಮಾಹಿತಿ ಹಾಗೂ ಗುರುತಿಸುವ ಸ್ಥಳಗಳನ್ನು ಪೊಲೀಸರು ಮಾರ್ಕ್ ಮಾಡುತ್ತಿರುವುದಾಗಿ ಮಾಹಿತಿ ಲಭ್ಯವಾಗಿತ್ತಿದೆ. ಆರಂಭದ ಹಂತದಲ್ಲಿ ಸ್ಥಳಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದ್ದು ಮುಂದಿನ ಹಂತದಲ್ಲಿ ಮಾನವ ಮೃತದೇಹಗಳನ್ನು ಹೊರತೆಗೆಯುವ ಕಾರ್ಯಕ್ಕೆ ಮುಂದಾಗಲಿದ್ದಾರೆ ಎಂದು ತಿಳಿದು ಬಂದಿದೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video