ದೆಹಲಿ:- ಐದು ವರ್ಷ ನಾನೇ ಸಿಎಂ, ಅಧಿಕಾರ ಹಂಚಿಕೆ ಚರ್ಚೆಯೇ ಆಗಿಲ್ಲ. ಡಿ.ಕೆ.ಶಿವಕುಮಾರ್ಗೆ ಕೆಲವು ಶಾಸಕರ ಬೆಂಬಲವಷ್ಟೇ ಇದೆ, 2028ರಲ್ಲೂ ನನ್ನದೇ ನಾಯಕತ್ವ ಎಂದೆಲ್ಲ ದಿಲ್ಲಿಯ ಹೈಕಮಾಂಡ್ ಅಂಗಳದಲ್ಲೇ ನಿಂತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊನ್ನೆ ಕಹಳೆ ಮೊಳಗಿಸಿದ್ದು, ಕಾಂಗ್ರೆಸ್ನ ಅಗ್ರ ನಾಯಕತ್ವವನ್ನು ಕಳವಳಕ್ಕೀಡು ಮಾಡಿದೆ.
ಈ ಬಗ್ಗೆ ಸ್ವತಃ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸೇರಿದಂತೆ ಕೆಲವು ಪ್ರಮುಖರು ತುಸು ಆತಂಕವನ್ನೂ ವ್ಯಕ್ತಪಡಿಸಿದ್ದಾರೆ ಎಂದು ದಿಲ್ಲಿ ಮೂಲಗಳಿಂದ ತಿಳಿದು ಬಂದಿದೆ.
ಸಿದ್ದರಾಮಯ್ಯ ದಿಲ್ಲಿಯಲ್ಲಿ ಸ್ಫೋಟಿಸಲು ಕಾರಣ ಎರಡು ಎನ್ನುತ್ತವೆ ಅವರ ಬಣದ ಮೂಲಗಳು. ಮೊದಲನೆಯದಾಗಿ ದಿಲ್ಲಿಯಲ್ಲಿದ್ದರೂ ರಾಹುಲ್ ಗಾಂಧಿ ಹಾಗೂ ವೇಣುಗೋಪಾಲ್ ಅವರನ್ನು ಭೇಟಿ ಮಾಡಲು ಸಾಧ್ಯವಾಗದೇ ಇದ್ದದ್ದು. ಎರಡನೆಯದಾಗಿ ಆ ಸಂದರ್ಭದಲ್ಲಿ ಬೆಂಗಳೂರಿನಲ್ಲಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಕೆಲವು ಸಚಿವರು ದೌಡಾಯಿಸಿ, ಸಿದ್ದರಾಮಯ್ಯ ರಾಹುಲ್ ಭೇಟಿಗೆ ಅವಕಾಶ ಕೊಡಿಸುವಂತೆ ಹೇರಿದ ಒತ್ತಡವೂ ವಿಫಲವಾದದ್ದು. ಇದೆಲ್ಲದರಿಂದಾಗಿಯೇ ನಾನೇ 5 ವರ್ಷ ಸಿಎಂ ಎಂದು ಇಲ್ಲಿ ಕರ್ನಾಟಕದಲ್ಲಿ ಹೇಳುತ್ತಿದ್ದ ಸಿದ್ದರಾಮಯ್ಯ ಇದ್ದಕ್ಕಿದ್ದಂತೆ ದಿಲ್ಲಿಯಲ್ಲಿ ಘಂಟಾಘೋಷವಾಗಿ ಸಾರಿದರು ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಇದು ರಾಜಕೀಯವಾಗಿ ಬೇರೆಯೇ ಸಂದೇಶ ರವಾನಿಸುತ್ತದೆ ಎಂಬ ಅನಿಸಿಕೆ ಜತೆಗೆ, ದುರ್ಬಲ ಹೈಕಮಾಂಡ್ ಎಂದು ವಿಪಕ್ಷಗಳ ಬಾಯಿಗೆ ಆಹಾರವಾಗುತ್ತಿರುವ ಆತಂಕ ಕಾಂಗ್ರೆಸ್ ಹೈಕಮಾಂಡ್ನದ್ದು. ಬಿಹಾರ ಚುನಾವಣೆಗೆ ಸಿದ್ಧವಾಗುತ್ತಿರುವ ಹೊತ್ತಿನಲ್ಲೇ ಆಗಿರುವ ಈ ಬೆಳವಣಿಗೆ ದಿಲ್ಲಿ ನಾಯಕತ್ವಕ್ಕೆ ತಲೆನೋವಾಗಿ ಪರಿಣಮಿಸಿದೆ ಎನ್ನುತ್ತವೆ ಮೂಲಗಳು.
ಏತನ್ಮಧ್ಯೆ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸೋಮವಾರ ಅಥವಾ ಮಂಗಳವಾರ ಮತ್ತೆ ಬೆಂಗಳೂರಿಗೆ ಆಗಮಿಸಲಿದ್ದು, ಈ ಸಂದರ್ಭದಲ್ಲಿ ಹೈಕಮಾಂಡ್ ಕಳವಳದ ಕುರಿತು ಸಿದ್ದರಾಮಯ್ಯ ಜತೆಗೆ ಚರ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಆ. 2ಕ್ಕೆ ರಾಹುಲ್, ಸಿದ್ದು ಮುಖಾಮುಖಿ ಈ ಬೆಳವಣಿಗೆಗಳ ನಡುವೆ ಆಗಸ್ಟ್ 1ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ದಿಲ್ಲಿಗೆ ತೆರಳಬೇಕಿದ್ದು ಆ. 2ರಂದು ಅಲ್ಲಿ ನಡೆಯಲಿರುವ ಕಾಂಗ್ರೆಸ್ ಕಾನೂನು ಕೋಶದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಬೇಕಿದೆ. ರಾಹುಲ್ ಗಾಂಧಿ ಅವರೇ ಕಾರ್ಯಕ್ರಮದ ಉದ್ಘಾಟಕರಾಗಿದ್ದು ಉಭಯ ನಾಯಕರೂ ವೇದಿಕೆ ಹಂಚಿಕೊಳ್ಳಬಹುದು. ಈ ಸಂದರ್ಭದಲ್ಲಿ ರಾಜ್ಯ ರಾಜಕಾರಣದ ಬಗ್ಗೆ ಗಮನ ಸೆಳೆಯಬಹುದು ಎಂಬ ನಿರೀಕ್ಷೆಗಳೂ ಹುಟ್ಟಿಕೊಂಡಿವೆ.