ಬೆಂಗಳೂರು

ಕನ್ನಡ ಬೆಳ್ಳಿತೆರೆಯಲ್ಲಿ ಬೆಳಗಿದ ಅಭಿನೇತ್ರಿ ನಟಿ ಬಿ.ಸರೋಜಾ ದೇವಿ ನಿಧನ

ಬೆಂಗಳೂರು:- ಹಿರಿಯ ನಟಿ ಬಿ.ಸರೋಜಾ ದೇವಿ ನಿಧನ ಹೊಂದಿದ್ದಾರೆ. ಅವರ ಆರೋಗ್ಯದಲ್ಲಿ ಅಲ್ಪ ಏರುಪೇರು ಕಂಡು ಇಹಲೋಕ ತ್ಯಜಿಸಿದರು.

ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿರುವ ಬಿ.ಸರೋಜಾದೇವಿ ದಕ್ಷಿಣ ಭಾರತದ ಧೀಮಂತ ಅಭಿನೇತ್ರಿ. ಸುಮಾರು 6 ದಶಕಗಳ ಕಾಲ ಚಿತ್ರರಂಗದ ಸೇವೆ ಮಾಡಿರುವ ಇವರು 5 ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಪದ್ಮಭೂಷಣ ಪುರಸ್ಕೃತರಾಗಿರುವ ಸರೋಜಾದೇವಿ ತಮ್ಮ 17ನೇ ವಯಸ್ಸಿನಲ್ಲಿಯೇ ಕನ್ನಡ ಚಿತ್ರರಂಗದ ಭೀಷ್ಮ ಹೊನ್ನಪ್ಪ ಭಾಗವತರ್ ಅವರ `ಮಹಾಕವಿ ಕಾಳಿದಾಸ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು.

ಜನವರಿ 7, 1938ರಲ್ಲಿ ಜನಿಸಿದ ಹಿರಿಯ ನಟಿ ಬಿ.ಸರೋಜಾದೇವಿ ಅವರಿಗೆ 87 ವರ್ಷ ವಯಸ್ಸಾಗಿತ್ತು. ಒಕ್ಕಲಿಗ ಸಂಪ್ರದಾಯದಂತೆ ಸರೋಜಾದೇವಿ ಅಂತ್ಯಕ್ರಿಯೆ ನಡೆಯಲಿದೆ.

ಬಿ.ಸರೋಜಾದೇವಿ ಅವರು ಕನ್ನಡ ಚಿತ್ರರಂಗದ ಪ್ರಮುಖ ನಟಿ. ಅವರನ್ನು ‘ಅಭಿನಯ ಸರಸ್ವತಿ’ ಎಂದು ಕರೆಯಲಾಗುತ್ತಿತ್ತು. ಅವರು ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗಗಳಲ್ಲಿ ಹೆಸರುವಾಸಿಯಾಗಿದ್ದರು. ಅವರು 1955 ರಿಂದ 1984 ರವರೆಗೆ ಸತತವಾಗಿ 161 ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದರು.

ಕನ್ನಡದಲ್ಲಿ ಡಾ.ರಾಜ್‌ಕುಮಾರ್, ಕಲ್ಯಾಣ್‌ಕುಮಾರ್, ಉದಯಕುಮಾರ್ ಅವರ ಜೊತೆ ನಟಿಸಿದರು. ತೆಲುಗಿನಲ್ಲಿ ಎ. ನಾಗೇಶ್ವರರಾವ್, ಎನ್.ಟಿ.ರಾಮರಾವ್ ಅವರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದರು. ತಮಿಳಿನಲ್ಲಿ ಜೆಮಿನಿ ಗಣೇಶನ್, ಶಿವಾಜಿಗಣೇಶನ್ ಜೊತೆಗೆ 22 ಹಿಟ್ ಚಿತ್ರಗಳಲ್ಲಿ, ಎಂ.ಜಿ. ರಾಮಚಂದ್ರನ್ ಜೊತೆ 26 ಹಿಟ್ ಚಿತ್ರಗಳಲ್ಲಿ ನಟಿಸಿದರು. ಹಿಂದಿಯಲ್ಲಿ ದಿಲೀಪ್ ಕುಮಾರ್, ರಾಜೇಂದ್ರಕುಮಾರ್, ಶಮ್ಮೀಕಪೂರ್, ಸುನಿಲ್‌ದತ್ ಜೊತೆ ನಟಿಸಿದ ಸರೋಜಾದೇವಿ, ಚತುರ್ಭಾಷಾ ತಾರೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮೊದಲ ಕನ್ನಡ ನಟಿ. ದಶಕಗಳ ನಂತರ ಜಯಂತಿ ನಾಲ್ಕು ಭಾಷೆಯಲ್ಲಿ ನಟಿಸಿದರು.

ಅಮರ ಶಿಲ್ಪಿ ಜಕಣಾಚಾರಿ, ಮಲ್ಲಮ್ಮನ ಪವಾಡ, ಭಾಗ್ಯವಂತರು, ಬಬ್ರುವಾಹನ, ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮಾ, ಲಕ್ಷ್ಮೀಸರಸ್ವತಿ, ಕಥಾಸಂಗಮ ಮುಂತಾದ ಕನ್ನಡ ಸಿನಿಮಾಗಳಲ್ಲಿ ಸರೋಜಾ ದೇವಿ ನಟಿಸಿದ್ದರು. ತಮಿಳಿನ ಪಾಟ್ಟಾಲಿ ಮುತ್ತು, ಪಡಿಕಥ ಮೇಥೈ, ಕಲ್ಯಾಣ ಪರಿಸು, ತೆಲುಗಿನ ಪಂಡರಿ ಭಕ್ತಲು, ದಕ್ಷಯಜ್ಞಂ, ಹಿಂದಿಯ ಆಶಾ, ಮೆಹಂದಿ ಲಗ ಕೆ ರಖನಾ, ಮಲೆಯಾಳಂನ ಮುತ್ತುಮಿಂತ್ರೋ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

ಒಂದು ಕಾಲದಲ್ಲಿ ಕನ್ನಡ ಬೆಳ್ಳಿತೆರೆಯಲ್ಲಿ ಬೆಳಗಿದ ಅಭಿನೇತ್ರಿ, ಕಿತ್ತೂರು ಚೆನ್ನಮ್ಮ ಚಿತ್ರದಲ್ಲಿ ಹೂಂಕರಿಸಿದ್ದ ಬಿ.ಸರೋಜಾದೇವಿ ಬಭ್ರುವಾಹನ ಚಿತ್ರದಲ್ಲಿ ಚಿತ್ರಾಂಗದೆಯಾಗಿದ್ದರು. ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿರುವ ಭಾರತೀಯ ನಟಿ. ಅವರು ಏಳು ದಶಕಗಳಲ್ಲಿ ಸುಮಾರು 200 ಚಿತ್ರಗಳಲ್ಲಿ ನಟಿಸಿದ್ದಾರೆ. ಆಕೆಯನ್ನು ಕನ್ನಡದಲ್ಲಿ “ಅಭಿನಯ ಸರಸ್ವತಿ” (ನಟನೆಯ ಸರಸ್ವತಿ) ಮತ್ತು ತಮಿಳಿನಲ್ಲಿ “ಕನ್ನಡತು ಪೈಂಗಿಲಿ” (ಕನ್ನಡದ ಗಿಳಿ) ಎಂಬ ಉಪನಾಮಗಳಿಂದ ಕರೆಯಲಾಗುತ್ತದೆ. ಅವರು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರು.

17 ನೇ ವಯಸ್ಸಿನಲ್ಲಿ, ಅವರನ್ನು ಕನ್ನಡ ಚಿತ್ರರಂಗದ ಮೊದಲ ಮಹಿಳಾ ಸೂಪರ್‌ಸ್ಟಾರ್ ಎಂದೂ ಕರೆದರು. ಸರೋಜಾದೇವಿ ಅವರು ತಮ್ಮ ಕನ್ನಡ ಚಲನಚಿತ್ರ ಮಹಾಕವಿ ಕಾಳಿದಾಸ (1955) ಚಿತ್ರದ ಮೂಲಕ ದೊಡ್ಡ ಬ್ರೇಕ್ ಪಡೆದರು. ಅವರು ಪಾಂಡುರಂಗ ಮಹಾತ್ಯಂ (1957) ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು ಮತ್ತು 1970 ರ ದಶಕದ ಅಂತ್ಯದವರೆಗೆ ಹಲವಾರು ಯಶಸ್ವಿ ಚಲನಚಿತ್ರಗಳಲ್ಲಿ ನಟಿಸಿದರು. ತಮಿಳು ಚಲನಚಿತ್ರ ನಾಡೋಡಿ ಮನ್ನನ್ (1958) ಅವರನ್ನು ತಮಿಳು ಚಿತ್ರರಂಗದ ಅಗ್ರ ನಟಿಯರಲ್ಲಿ ಒಬ್ಬರನ್ನಾಗಿ ಮಾಡಿತು. 1967 ರಲ್ಲಿ ಅವರ ಮದುವೆಯ ನಂತರ, ಅವರು 1974 ರವರೆಗೆ ತಮಿಳು ಚಲನಚಿತ್ರಗಳಲ್ಲಿ ಬೇಡಿಕೆಯ ನಟಿಯಾಗಿ ಎರಡನೇ ಸ್ಥಾನದಲ್ಲಿ ಮುಂದುವರೆದರು, ಆದರೆ ಅವರು 1958 ರಿಂದ 1980 ರವರೆಗೆ ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಅಗ್ರ ನಟಿಯಾಗಿ ಮುಂದುವರೆದರು. ಪೈಘಮ್ (1959) ದಿಂದ ಪ್ರಾರಂಭಿಸಿ 1960 ರ ದಶಕದ ಮಧ್ಯಭಾಗದವರೆಗೆ ಅವರು ಹಿಂದಿ ಚಲನಚಿತ್ರಗಳಲ್ಲಿ ನಟಿಸಿದರು.