ಬೆಂಗಳೂರು:- ನಮ್ಮ ಹೆಮ್ಮೆಯ ಕರುನಾಡು ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್ ನಂದಿನಿ ಇದೀಗ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಲಂಡನ್ ಮೂಲದ ಬ್ರ್ಯಾಂಡ್ ಫೈನಾನ್ಸ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಭಾರತದ 100 ಬ್ರ್ಯಾಂಡ್‌ಗಳಲ್ಲಿ ನಮ್ಮ ನಾಡಿನ ಅಸ್ಮಿತೆಯಾದ ನಂದಿನಿ ಉತ್ಪನ್ನಗಳು ಕೂಡ ಮಹತ್ವದ ಸ್ಥಾನ ಪಡೆದುಕೊಂಡಿದೆ.
ಈ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್ ನಂದಿನಿ ಮೆರುಗು ಮೂಡಿಸಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಸಂತಸ ವ್ಯಕ್ತಪಡಿಸಿ, ಇದು ರೈತರ ಶ್ರಮ ಮತ್ತು ಹೆಚ್ಚುತ್ತಿರುವ ಗ್ರಾಹಕರ ವಿಶ್ವಾಸಾರ್ಹತೆಯ ಪ್ರತಿಬಿಂಬ ಎಂದು ಶ್ಲಾಘಿಸಿದ್ದಾರೆ.
ನಮ್ಮ ನಂದಿನಿ ಬ್ರ್ಯಾಂಡ್‌ಗೆ ಸಿಕ್ಕಿರುವ ಸ್ಥಾನ ಎಷ್ಟಿರಬಹುದು:
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರು, ಅಪ್ಪಟ ಕನ್ನಡ ಬ್ರ್ಯಾಂಡ್ ನಂದಿನಿಯು 1,079 ಮಿಲಿಯನ್ ಡಾಲರ್ (9,009.65 ಕೋಟಿ) ಮೌಲ್ಯದೊಂದಿಗೆ “ಬ್ರ್ಯಾಂಡ್ ಫೈನಾನ್ಸ್ 2025″ರ ಪಟ್ಟಿಯಲ್ಲಿ 38ನೇ ಸ್ಥಾನಕ್ಕೆ ಏರಿದೆ. ಕಳೆದ ವರ್ಷ ನಂದಿನಿ ಭಾರತದ ಟಾಪ್ 100 ಅಮೂಲ್ಯ ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ 43ನೇ ಸ್ಥಾನದಲ್ಲಿತ್ತು. ಬ್ರ್ಯಾಂಡ್ ಫೈನಾನ್ಸ್ ಲಂಡನ್ ಮೂಲದ ಅಂತರ ರಾಷ್ಟ್ರೀಯ ಸಲಹಾ ಸಂಸ್ಥೆಯಾಗಿದೆ ಎಂದಿದ್ದಾರೆ.
ಇನ್ನು ಆಹಾರ ಮತ್ತು ಪಾನೀಯ ವಿಭಾಗದಲ್ಲಿ 4ನೇ ಸ್ಥಾನ ಪಡೆದಿರುವ ನಂದಿನಿಯು ಅಮುಲ್, ಬ್ರಿಟಾನಿಯಾ ಮತ್ತು ಮದರ್ ಡೈರಿಗಳಂತಹ ದೊಡ್ಡ ದೊಡ್ಡ ಬ್ರ್ಯಾಂಡ್‌ಗಳ ಜೊತೆಗೆ ಸ್ಪರ್ಧಿಸುತ್ತಿದೆ. ನಂದಿನಿಯು ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವುದು ಸರ್ಕಾರದ ಸಂಕಲ್ಪ, ರೈತರ ಶ್ರಮ ಮತ್ತು ಹೆಚ್ಚುತ್ತಿರುವ ಗ್ರಾಹಕರ ವಿಶ್ವಾಸಾರ್ಹತೆಯ ಪ್ರತಿಬಿಂಬವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.