ಚಿಕ್ಕಮಗಳೂರು:- ಜಿಲ್ಲೆಯ ಎನ್.ಆರ್.ಪುರದ ಕರವೇ ಘಟಕದಿಂದ ರಾಜ್ಯಾಧ್ಯಕ್ಷ ನಾರಾಯಣ ಗೌಡರವರ ಹುಟ್ಟುಹಬ್ಬವನ್ನು ಇತ್ತೀಚಿಗೆ ವಿಭಿನ್ನವಾಗಿ ಆಚರಿಸಲಾಯಿತು. ಶಾಂತಿ ಭವನ ಸೀಗುವಾನಿ ಸರ್ಕಲ್ ಬಳಿಯ ಕನ್ನಡ ಧ್ವಜವನ್ನು ಬದಲಾಯಿಸಲಾಯಿತು. ಶಾಂತಿ ಭವನದ ಧ್ವಜವನ್ನು ಚರ್ಚ್ ಸಮಿತಿಯ ಟ್ರಸ್ಟಿನ ಪೌಲೋಸ್ ದ್ವಜಾರೋಹಣ ಮಾಡಿದರು. ಸೀಗುವಾನಿ ಸರ್ಕಲ್ ನಲ್ಲಿ ಗ್ರಾಮದ ಹಿರಿಯರಾದ ಪಿ.ಜೆ.ಬೇಬಿ ಧ್ವಜಾರೋಹಣ ನೆರವೇರಿಸಿದರು.
ಈ ಸಂಧರ್ಭದಲ್ಲಿ ಕರವೇ ಕುಟುಂಬದ ಹತ್ತನೇ ತರಗತಿಯಲ್ಲಿ ಉತ್ತಮವಾದ ಫಲಿತಾಂಶ ಪಡೆದ ನಾಲ್ಕು ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ಮುರಾರ್ಜಿ ವಸತಿ ಶಾಲೆಯ ಗ್ರೀಶ್ಮ ಗಿರಿರಾಜ್ ಸೇರಿದಂತೆ ಮಾನ್ವಿತಾ, ತನು, ಮತ್ತು ಶ್ರಾವ್ಯ ಇವರುಗಳನ್ನು ಶಾಲು ಹೊದಿಸಿ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಸಂಘಟನೆಯ ಸಿಜ್ಜುರವರು, ನಾರಾಯಣ ಗೌಡರ ಹೋರಾಟದ ಕಿಚ್ಚು ಕನ್ನಡಕ್ಕಾಗಿ ಅರ್ಪಣಾ ಮನೋಭಾವದ ಬಗ್ಗೆ ವಿವರಿಸಿದರು. ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ಶ್ರೀನಿವಾಸ್ ಮಾತನಾಡಿ, ಕನ್ನಡವನ್ನು ಕನ್ನಡಿಗರಿಗಿಂತ ಭಾಷಾ ಅಲ್ಪಸಂಖ್ಯಾತರೇ ಹೆಚ್ಚು ಪ್ರೀತಿಸಿ ಗೌರವಿಸುತ್ತಾರೆ ಎಂದರಲ್ಲದೆ ನಾರಾಯಣ ಗೌಡರಿಗೆ ಇನ್ನಷ್ಟು ಆರೋಗ್ಯ, ಹೋರಾಟದ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಹಾರೈಸಿದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದ ಅಭಿನವ ಗಿರಿರಾಜ್, ಶಿಕ್ಷಕ ಮಂಜುನಾಥ್, ಪದಾಧಿಕಾರಿಗಳಾದ ಪಿ.ಸಿ.ಬಿನು, ಬಾಬು ಹಾಗೂ ಇತರರು ಮಾತನಾಡಿದರು.
ಕರವೇ ಘಟಕದ ಸಾಕಷ್ಟು ಮಹಿಳಾ ಸದಸ್ಯರು, ಯುವಕರು ಪಾಲ್ಗೊಂಡಿದ್ದರು. ನಾಡಗೀತೆ, ಇತರೆ ಕನ್ನಡ ಗೀತೆಗಳನ್ನು ಹಾಡಲಾಯಿತು. ಕೇಕ್ ಕತ್ತರಿಸಿ ನಾರಾಯಣ ಗೌಡರ ಹುಟ್ಟು ಹಬ್ಬವನ್ನು ಆಚರಿಸಲಾಯಿತು.