ಬೆಂಗಳೂರು

ಕಾಂಡಿಮೆಂಟ್ಸ್, ಬೇಕರಿ, ಸಣ್ಣಪುಟ್ಟ ಅಂಗಡಿಗಳು ಸಂಪೂರ್ಣ ಬಂದ್: ಹೋರಾಟಕ್ಕೆ ಕರೆ

ಬೆಂಗಳೂರು:- ಡಿಜಿಟಲ್‌ ಯುಗದಲ್ಲಿ ಸಾಗುತ್ತಿರುವ ನಾವು ಇಲ್ಲಿವರೆಗೆ ಆನ್‌ಲೈನ್‌ ಪೇಮೆಂಟ್‌, ಡಿಜಿಟಲ್‌ ಪೇಮೆಂಟ್‌ ಅನ್ನು ನಮ್ಮ ಒಡನಾಡಿ ಎನ್ನುವಂತೆ ಬಳಸಿಕೊಳ್ಳುತ್ತಿದ್ದೆವು. ಕೆಲವೇ ಸೆಕೆಂಡ್‌ಗಳಲ್ಲಿ ಯುಪಿಐ ಸ್ಕ್ಯಾನ್‌ ಮಾಡಿ ಹಣ ಪಾವತಿ ಮಾಡುವ ವ್ಯವಸ್ಥೆಗೆ ಜನರೆಲ್ಲರೂ ಸಲಾಂ ಹೊಡೆದಿದ್ದರು. ಮುಖ್ಯವಾಗಿ ತಳ್ಳುಗಾಡಿಗಳು, ಸಣ್ಣಪುಟ್ಟ ಅಂಗಡಿಯಿಂದ ಹಿಡಿದು ದೊಡ್ಡ ದೊಡ್ಡ ಮಳಿಗೆ ಸೇರಿ ಎಲ್ಲೆಡೆಯೂ ವ್ಯಾಪಾರಿಗಳಿಗೆ ಈ ಡಿಜಿಟಲ್‌ ಕ್ಯೂಆರ್‌ ಕೋಡ್‌ಗಳು ತಮ್ಮ ಪಾವತಿ ವಿಧಾನವನ್ನು ಸರಳಗೊಳಿಸಿತ್ತು. ಆದರೆ, ಇದೇ ಈಗ ಅವರಿಗೆ ಮುಳುವಾಗಿದೆ.

ಕ್ಯಾಶ್‌ಲೆಸ್‌ ಪದ್ಧತಿಗೆ ಒಗ್ಗಿಕೊಂಡು ಡಿಜಿಟಲ್‌ ಪಾವತಿಯನ್ನೇ ಅವಲಂಬಿಸಿರುವ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ಬಿಗ್‌ ಶಾಕ್‌ ನೀಡಿದೆ. ರಾಜ್ಯದ ಬೇಕರಿ, ಹೋಟೆಲ್, ಕಿರಾಣಿ ಅಂಗಡಿ, ಟೀ ಅಂಗಡಿ ಸೇರಿದಂತೆ ಸಣ್ಣ ವ್ಯಾಪಾರಿಗಳು ಯುಪಿಐ (UPI) ಮೂಲಕ ನಡೆಸಿದ ವಾರ್ಷಿಕ ವಹಿವಾಟು ಮೊತ್ತ ₹40 ಲಕ್ಷ ದಾಟಿದರೆ, ಅವರು ಕೂಡ ಜಿಎಸ್‌ಟಿ ನೋಂದಣಿ ಮಾಡಿಸಬೇಕು ಎಂಬ ನಿಯಮಾನುಸಾರ ಜಿಎಸ್‌ಟಿ ನೋಟಿಸ್ ನೀಡಲಾಗುತ್ತಿದೆ‍.

ವಾಣಿಜ್ಯ ತೆರಿಗೆ ಇಲಾಖೆ ಎಲ್ಲಾ ಸಣ್ಣ ವ್ಯಾಪಾರಿಗಳ ಯುಪಿಐ ಮೂಲಕ ನಡೆದ ವಹಿವಾಟಿನ ಮಾಹಿತಿಯನ್ನು ಸಂಗ್ರಹಿಸಿದ್ದು, ಇದರ ಆಧಾರದಲ್ಲಿ ವಹಿವಾಟಿದಾರರನ್ನು ಗುರುತಿಸಿ ಕ್ರಮ ತೆಗೆದುಕೊಳ್ಳುತ್ತಿದೆ. ಕೆಲ ಬೇಕರಿ ಮತ್ತು ಟೀ ಅಂಗಡಿಗಳಿಗೆ ಹೊಸದಾಗಿ ಜಿಎಸ್‌ಟಿ ಸಲ್ಲಿಸುವಂತೆ ನೋಟಿಸ್ ನೀಡಲಾಗಿದೆ. ಇದರಿಂದ ವ್ಯಾಪಾರಿಗಳು ಶಾಕ್‌ಗೆ ಒಳಗಾಗಿದ್ದಾರೆ. 2017ರ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ ಪ್ರಕಾರ ಸರಕುಗಳ ಮಾರಾಟ ಮೊತ್ತ ವರ್ಷಕ್ಕೆ ₹40 ಲಕ್ಷ ದಾಟಿದರೆ, ಸೇವೆಗಳ ಪೂರೈಕೆ ಮೊತ್ತ ವರ್ಷಕ್ಕೆ ₹20 ಲಕ್ಷ ದಾಟಿದರೆ ಅದಕ್ಕೆ ಜಿಎಸ್‌ಟಿ ನೋಂದಣಿ ಕಡ್ಡಾಯ.

ಜುಲೈ 23ರಿಂದ ಬಂದ್‌ಗೆ ಕರೆ: ಯುಪಿಐ ಮೂಲಕ ವರ್ಷಕ್ಕೆ ₹40 ಲಕ್ಷಕ್ಕಿಂತ ಹೆಚ್ಚು ವಹಿವಾಟು ನಡೆಸಿದ ಬೇಕರಿ, ಕಾಂಡಿಮೆಂಟ್ಸ್ ಮತ್ತು ಇತರ ಸಣ್ಣ ಅಂಗಡಿಗಳಿಗೆ ಜಿಎಸ್‌ಟಿ ನೋಟಿಸ್ ನೀಡಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸಣ್ಣ ವ್ಯಾಪಾರಿ ಸಂಘಟನೆಗಳು ಹಾಗೂ ಬೇಕರಿ, ಕಾಂಡಿಮೆಂಟ್ಸ್ ಮಾಲೀಕರು ಈ ನೋಟಿಸ್‌ಗಳ ವಿರುದ್ಧ ಹೋರಾಟಕ್ಕೆ ನಿರ್ಧರಿಸಿದ್ದಾರೆ. ಹಂತ ಹಂತವಾಗಿ ಜುಲೈ 23ರಂದು ಹಾಲು ಮಾರಾಟಗಾರರು ಪ್ರತಿಭಟನೆ ನಡೆಸಲಿದ್ದಾರೆ. ಜುಲೈ 24ರಂದು ಗುಟ್ಕಾ ಮತ್ತು ಸಿಗರೇಟ್ ಅಂಗಡಿಗಳು ಬಂದ್ ಮಾಡಿ ಹೋರಾಟ ನಡೆಸಲಿದ್ದಾರೆ. ಜುಲೈ 25ರಂದು ಕಾಂಡಿಮೆಂಟ್ಸ್, ಬೇಕರಿ ಹಾಗೂ ಸಣ್ಣ ಪುಟ್ಟ ಅಂಗಡಿಗಳು ಸಂಪೂರ್ಣ ಬಂದ್ ಮಾಡಿ ರಾಜ್ಯಮಟ್ಟದಲ್ಲಿ ಹೋರಾಟಕ್ಕೆ ಮುಂದಾಗಿದ್ದಾರೆ.

ಈ ಮೂಲಕ ವ್ಯಾಪಾರಿಗಳು ಜಿಎಸ್‌ಟಿ ನೋಟಿಸ್ ವಾಪಸ್ ಪಡೆಯುವಂತೆ ಒತ್ತಾಯಿಸಲಿದ್ದಾರೆ. ಹೀಗಾಗಿ ಹೋರಾಟದ ದಿನಗಳಲ್ಲಿ ಪ್ರಮುಖವಾಗಿ ಹಾಲು, ಸಿಗರೇಟ್, ಗುಟ್ಕಾ, ಕಾಂಡಿಮೆಂಟ್ಸ್ ಹಾಗೂ ಬೇಕರಿ ಅಂಗಡಿಗಳು ಮುಚ್ಚಲಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಮೇಲೆ ಪರಿಣಾಮ ಬೀರಲಿದೆ.