ಬೆಂಗಳೂರು:- ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜೂನ್ 4ರಂದು ನಡೆದ ಕಾಲ್ತುಳಿತದಲ್ಲಿ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಾಳೆ ಬೆಂಗಳೂರಿನಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಗೋಪಾಲಯ್ಯ ಅವರು, ಬೆಂಗಳೂರಿನ ವಿಧಾನಸೌಧ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ವಿಜಯೋತ್ಸವ ವೇಳೆ ಎಲ್ಲರನ್ನು ಆಹ್ವಾನಿಸಿದ ಹಿನ್ನೆಲೆ ದುರ್ಘಟನೆಗೆ ಕಾರಣವಾಗಿದೆ. ಇದರ ವಿರುದ್ಧ ಸರ್ಕಾರದ ಧೋರಣೆ ನಿರ್ಲಕ್ಷ್ಯ ಖಂಡಿಸಿ ಬೆಳಗ್ಗೆ 10.30 ಗಂಟೆಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.
ಆರ್‌ಸಿಬಿ ತಂಡದವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ. ಡಿಪಿಎಆರ್ ಕಾರ್ಯದರ್ಶಿಗಳು ಫ್ಯಾನ್ಸ್ ಆಹ್ವಾನಿಸಿದ್ದರು. ಇದೇ ವಿಚಾರವಾಗಿ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಹ ಸಂಭ್ರಮಾಚರಣೆಗೆ ಆಹ್ವಾನಿಸಿದ್ದರು. ಸ್ಟೇಡಿಯಂ ಬಳಿ ಕಾಲ್ತುಳಿತ ಉಂಟಾಗಿ 11 ಮಂದಿ ಜೀವ ಹಾನಿ ಆಯಿತು. ಇದಕ್ಕೆ ಸರ್ಕಾರದ ನಿರ್ಲಕ್ಷ್ಯ, ಪೂರ್ವ ತಯಾರಿ ಇಲ್ಲದೇ ಮಾಡಿಕೊಂಡ ತರಾತುರಿ ಕಾರ್ಯಕ್ರಮ ಹೀಗಾಗಿ ಜನರಿಗೆ ಶಿಕ್ಷೆ ನೀಡಿದಂತಾಯಿತು. ಹಾಗಾದರೆ ಡಿಸಿಎಂ ಡಿ.ಕೆ ಶಿವಕುಮಾರ್ ಮತ್ತು ಡಿಪಿಎಆರ್ ಕಾರ್ಯದರ್ಶಿಗಳನ್ನು ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದರು.
ಬಿಜೆಪಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಉಭಯ ಸದನಗಳ ಸದಸ್ಯರು, ಜಿಲ್ಲಾಧ್ಯಕ್ಷರು, ಕಾರ್ಯಕರ್ತರು ಸೇರಿದಂತೆ ಒಟ್ಟು 10 ಸಾವಿರ ಮಂದಿ ಭಾಗಿಯಾಗಲಿದ್ದಾರೆ. ಸರ್ಕಾರದ ಈ ನಡೆಯಿಂದ ದುರಂತ ಸಂಭವಿಸಿದೆ. ಪೊಲೀಸ್ ಇಲಾಖೆ ಪತ್ರ ಬರೆದರೂ ಆ ಬಗ್ಗೆ ತಲೆಕೆಡಿಸಿಕೊಳ್ಳದೇ ಕೈಗೊಂಡ ತರಾತುರಿ ನಿರ್ಧಾರಗಳಿಂದ ಬಡ ಜೀವಗಳು ಬಲಿಯಾಗಿವೆ. ಇದರ ಹೊಣೆ ಹೊತ್ತು ಕೂಡಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ರಾಜೀನಾಮೆ ನೀಡಬೇಕು ಎಂದು ಹೇಳಿದರು.
ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ತನ್ನ ಈ ದುರ್ಘಟನೆಯಲ್ಲಿ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಪೊಲೀಸ್ ಇಲಾಖೆ ಅಧಿಕಾರಿಗಳನ್ನು ಅಮಾನತು ಮಾಡಿಕೊಂಡಿದೆ. ಬೆಂಗಳೂರಿನ ಘಟನೆ, ಸರ್ಕಾರ ನಡೆದುಕೊಂಡು ರೀತಿ ಪೊಲೀಸ್ ಅಮಾನತು ಇದೊಂದು ರಾಜ್ಯದಲ್ಲಿ ಕಪ್ಪು ಚುಕ್ಕೆಯಾಗಿದೆ ಎಂದು ಅವರು ದೂರಿದರು.