ಮಂಡ್ಯ:- ಜಿಲ್ಲೆಯ ಕೆಆರ್ಎಸ್ ಡ್ಯಾಂ ಬಳಿ ಕಾವೇರಿ ಆರತಿ ಕಾರ್ಯಕ್ರಮ ಆಯೋಜನೆಗೆ ರಾಜ್ಯ ಸರ್ಕಾರವು ಭರ್ಜರಿ ತಯಾರಿ ನಡೆಸುತ್ತಿದ್ದು, ಇದೇ ಸಮಯದಲ್ಲಿ ಕಾವೇರಿ ಆರತಿಗೆ ವಿಘ್ನ ಎದುರಾಗಿದೆ. ಕಾವೇರಿ ಆರತಿ ಕಾರ್ಯಕ್ರಮಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ.!
ಉತ್ತರ ಭಾರತದಲ್ಲಿ ನಡೆಯುವ ಗಂಗಾರತಿ ಕಾರ್ಯಕ್ರಮವು ಪ್ರಸಿದ್ಧಿ ಪಡೆದಿದೆ, ಅದೇ ಮಾದರಿಯಲ್ಲಿ ಕರ್ನಾಟಕದ ಜೀವನದಿ ಕಾವೇರಿಗೂ ಆರತಿ ಬೆಳಗುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ರಾಜ್ಯ ಸರ್ಕಾರವು ಸಕಲ ಸಿದ್ಧತೆ ಮಾಡಿಕೊಂಡಿದೆ. ದಸರಾ ಸಂದರ್ಭದಲ್ಲಿ ಕಾವೇರಿ ಆರತಿ ಆಯೋಜಿಸುವ ಸಂಬಂಧ ಡಿ.ಕೆ ಶಿವಕುಮಾರ್ ಅವರು ಇತ್ತೀಚೆಗಷ್ಟೇ ಸಭೆ ಕೂಡ ನಡೆಸಿದ್ದರು. ಆದರೆ, ಇದಕ್ಕೆ ವಿರೋಧ ವ್ಯಕ್ತವಾಗಿದೆ. ಈ ಕಾರ್ಯಕ್ರಮ ವಿರೋಧಿಸಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು.
ಕೆಆರ್ಎಸ್ ಡ್ಯಾಂ ಬಳಿ ಡಿಸ್ನಿಲ್ಯಾಂಡ್ ಮಾದರಿಯ ಮನರಂಜನಾ ಪಾರ್ಕ್, ಕಾವೇರಿ ಆರತಿ ಕಾರ್ಯಕ್ರಮ ಪ್ರಶ್ನಿಸಿ ರೈತ ಸಂಘದ ನಾಯಕಿ ಮಂಡ್ಯ ಜಿಲ್ಲೆಯ ಸುನಂದಾ ಜಯರಾಂ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಮತ್ತು ಕಾವೇರಿ ನೀರಾವರಿ ನಿಗಮಕ್ಕೆ ನೋಟಿಸ್ ಜಾರಿ ಮಾಡಿ ವಿವರಣೆ ಕೇಳಿದೆ. ಇನ್ನು ಕೆಆರ್ಎಸ್ ಡ್ಯಾಂ ಬಳಿ 120 ಅಡಿಯ ಕಾವೇರಿ ವಿಗ್ರಹ ಸ್ಥಾಪಿಸಲಾಗುತ್ತಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಈ ಕಾಮಗಾರಿಗಾಗಿ ಯಂತ್ರೋಪಕರಣಗಳನ್ನು ಬಳಕೆ ಮಾಡಲಾಗಿದೆ ಎಂದು ಫೋಟೋಗಳನ್ನು ಕೂಡ ಸಲ್ಲಿಕೆ ಮಾಡಲಾಗಿದೆ.
ಕಾವೇರಿ ಆರತಿಗಾಗಿ 100 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ, ಡ್ಯಾಂನ 40 ಮೀಟರ್ ಅಂತರದಲ್ಲಿ 20 ಸಾವಿರದಿಂದ 25 ಸಾವಿರ ಜನರು ಸೇರುವ ದೊಡ್ಡ ಸ್ಟೇಡಿಯಂ ನಿರ್ಮಿಸಲಾಗುತ್ತಿದೆ. ಕನ್ನಂಬಾಡಿ ಕಟ್ಟೆ ಬಳಿ ಐದು ಸಾವಿರ ವಾಹನಗಳ ಪಾರ್ಕಿಂಗ್ಗೆ ಜಾಗ ರೆಡಿಯಾಗುತ್ತಿದೆ. ಇದು ಜಲಾಶಯದ ಸುರಕ್ಷತೆ, ಭದ್ರತೆಗೆ ಅಪಾಯಕಾರಿ. ಜೊತೆಗೆ ಇಲ್ಲಿನ ಪರಿಸರ, ನೀರಿಗೂ ಹಾನಿಕಾರಕ ಎಂದು ದೂರಲಾಗಿದೆ.
ಈ ಬಗ್ಗೆ ರಾಜ್ಯ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿರುವ ಕೋರ್ಟ್, ಕಾಮಗಾರಿಯಿಂದ ಕೆಆರ್ಎಸ್ ಡ್ಯಾಂಗೆ ಹಾನಿಯಾಗುವುದಿಲ್ಲವೇ? ಎಂದು ಕೇಳಿದೆ. ಡ್ಯಾಂನ ಸುರಕ್ಷತೆ ಸಮಿತಿಯ ಅನುಮತಿ ಏಕೆ ಪಡೆದಿಲ್ಲ? ಮನರಂಜನಾ ಪಾರ್ಕ್ ಕಾಮಗಾರಿಗೆ ತಜ್ಞರ ಅನುಮತಿ ಪಡೆಯಲಾಗಿದೆಯಾ? ಕಾವೇರಿ ಪ್ರತಿಮೆ ಸ್ಥಾಪಿಸುವಾಗ ತಜ್ಞರ ಸಲಹೆ ಪಾಲಿಸಲಾಗಿದೆಯೇ? ಎಂದು ರಾಜ್ಯ ಸರ್ಕಾರವನ್ನು ಕೇಳಿದೆ. ಕೊನೆಗೆ ಈ ಸಂಬಂಧ ಎರಡು ವಾರಗಳಲ್ಲಿ ಉತ್ತರ ನೀಡುವಂತೆ ನಿರ್ದೇಶಿಸಿದೆ. ಇದರಿಂದ ಡಿ.ಕೆ ಶಿವಕುಮಾರ್ ಅವರ ಕನಸಿಗೆ ಕೊಂಚ ಹಿನ್ನಡೆಯಾದಂತಿದೆ.