ಮಂಗಳೂರು:- ತಾನು ಸ್ವಚ್ಚತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾಗ ತನ್ನನ್ನು ಬೆದರಿಸಿ ಹೆಣಗಳನ್ನು ಹೂಳಿಸಿದ್ದರು. ತನಗೀಗ ಅದರ ಪಾಪಪ್ರಜ್ಞೆ ಕಾಡುತ್ತಿದ್ದು, ಸತ್ಯ ಬಿಚ್ಚಿಡಲು ಸಿದ್ಧನಿದ್ದೇನೆ ಎಂದು ಬೆಂಗಳೂರಿನ ವಕೀಲರಾದ ಓಜಸ್ವಿ ಗೌಡ ಹಾಗೂ ಸಚಿನ್ ದೇಶಪಾಂಡೆ ಮೂಲಕ ಪೊಲೀಸರನ್ನು ಸಂಪರ್ಕಿಸಿರುವ ಈತ ಜುಲೈ 4ರಂದು ಎಫ್ಐಆರ್ ದಾಖಲಿಸಿ ನಿನ್ನೆಯ ದಿನವಾದ ಶುಕ್ರವಾರ ಬೆಳ್ತಂಗಡಿ ನ್ಯಾಯಲಯಕ್ಕೂ ಹಾಜರಾಗಿದ್ದಾನೆ.
ಈ ಬೃಹತ್ ಬೆಳವಣಿಗೆ ಬೆನ್ನಲ್ಲೇ ಕೇಂದ್ರ ಮಕ್ಕಳ ಮತ್ತು ಕಲ್ಯಾಣ ಸಚಿವೆ ಅನ್ನಪೂರ್ಣ ದೇವಿ ಧರ್ಮಸ್ಥಳ ಸರಣಿ ಕೊಲೆಗಳ ಬಗ್ಗೆ ಮಾತನಾಡಿದ್ದು, ಧರ್ಮಸ್ಥಳದಲ್ಲಿ ನಡೆದಿರುವ ಕೊಲೆಗಳ ಬಗ್ಗೆ ವಿಸ್ತೃತ ತನಿಖೆ ನಡೆಸಬೇಕು, ಶವಗಳನ್ನು ಹೊರತೆಗೆದು ಅಲ್ಲಿನ ಕೃತ್ಯಗಳನ್ನು ಬಯಲುಗೊಳಿಸುವುದಾಗಿ ಹೇಳಿರುವ ವ್ಯಕ್ತಿಗೆ ಭದ್ರತೆ ನೀಡಬೇಕು ಎಂದು ಕರ್ನಾಟಕ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಮೂಲಕ ಧರ್ಮಸ್ಥಳ ಪ್ರಕರಣ ಸದ್ಯ ಮಾಧ್ಯಮ, ರಾಜಕಾರಣಿಗಳ ಗಮನದಲ್ಲಿದ್ದು, ಸರಿಯಾದ ತನಿಖೆ ನಡೆದು ಕೊಲೆಗಡುಕರು ಸಿಕ್ಕಿಬೀಳಲಿದ್ದಾರಾ ಎಂಬ ನಿರೀಕ್ಷೆ ಶುರುವಾಗಿದೆ. ಅತ್ತ ಮುಖವಾಡ ಧರಿಸಿರುವ ಕೊಲೆ ಗಡುಕರ ಎದೆಯಲ್ಲಿ ನಡುಕ ಶುರುವಾಗಿದೆ.
ಧರ್ಮಸ್ಥಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅತ್ಯಾಚಾರ ಮತ್ತು ಹತ್ಯೆಯಾದ ಶಾಲಾ ಬಾಲಕಿಯರು ಮತ್ತು ಮಹಿಳೆಯರ ಶವಗಳನ್ನು ಹೂಳಲು ಬಲವಂತ ಮತ್ತು ಬೆದರಿಕೆ ಹಾಕಲಾಗಿತ್ತು ಎಂದು ಆರೋಪಿಸಿ ವ್ಯಕ್ತಿಯೊಬ್ಬರು ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪುರುಷರು ಮತ್ತು ಮಹಿಳೆಯರ ಹತ್ಯೆಗಳ ಕುರಿತು ತನಿಖೆಯನ್ನು ಕೋರಿರುವ ವ್ಯಕ್ತಿ ಇದೇ ವೇಳೆ ತನಗೆ ಮತ್ತು ತನ್ನ ಕುಟುಂಬಕ್ಕೆ ರಕ್ಷಣೆ ಕೋರಿದ್ದಾರೆ. ತನ್ನ ಗುರುತನ್ನು ಬಹಿರಂಗಪಡಿಸದ ವ್ಯಕ್ತಿ ಸಲ್ಲಿಸಿದ ದೂರಿನಲ್ಲಿರುವ ವಿಷಯವು ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಆಪಾದಿತ ಕೊಲೆಗಳು, ಅತ್ಯಾಚಾರ ಮತ್ತು ಕೊಲೆಗಳು ಮತ್ತು ಈ ಅಪರಾಧ ಚಟುವಟಿಕೆಗಳನ್ನು ಮುಚ್ಚಿಹಾಕಿರುವ ಕುರಿತಾಗಿದೆ. ಅವರ ದೂರಿನ ಆಧಾರದ ಮೇಲೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.