Uncategorized

ಕ್ಷಣಕ್ಕೊಂದು ಟ್ವಿಸ್ಟ್‌ ಪಡೆಯುತ್ತಿರುವ ಪವರ್‌ ಶೇರಿಂಗ್‌ ಮತ್ತೆ ಮುನ್ನೆಲೆಗೆ

ದೆಹಲಿ:- ರಾಜ್ಯದಲ್ಲಿ ನಾಯಕತ್ವದ ಬದಲಾವಣೆಯ ಕುರಿತ ಚರ್ಚೆಗಳಿಗೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಫುಲ್‌ ಸ್ಟಾಪ್‌ ನೀಡಲು ಯತ್ನಿಸುತ್ತಿದ್ದಾರೆ. ಆದರೆ, ಎರಡು ದಿನಗಳ ಕಾಲ ದೆಹಲಿ ದಂಡಯಾತ್ರೆ ಮುಗಿಸಿ ಬಂದ ಬಳಿಕ ಸದ್ಯ ಸಿಎಂ ರಾಜ್ಯದಲ್ಲಿದ್ದಾರೆ.

ಆದರೆ, ಕಳೆದರೆಡು ದಿನಗಳ ಹಿಂದಷ್ಟೇ ದೆಹಲಿಯಿಂದ ವಾಪಸ್‌ ಆಗಿದ್ದ ಡಿ.ಕೆ ಶಿವಕುಮಾರ್‌ ಅವರಿಗೆ ಹೈಕಮಾಂಡ್‌ ದಿಢೀರ್‌ ಬುಲಾವ್‌ ನೀಡಿದ್ದು, ಈ ಹಿನ್ನೆಲೆಯಲ್ಲಿ ಡಿಕೆಶಿ ದೆಹಲಿಗೆ ಹಾರಿದ್ದಾರೆ.

ಹೀಗಾಗಿ ದಿನಕ್ಕೊಂದು, ಕ್ಷಣಕ್ಕೊಂದು ಟ್ವಿಸ್ಟ್‌ ಪಡೆಯುತ್ತಿರುವ ಈ ಪವರ್‌ ಶೇರಿಂಗ್‌ ವಿಚಾರ ಮತ್ತೆ ಮುನ್ನೆಲೆಗೆ ಬಂದಂತಾಗಿದೆ.

ಆರಂಭದಿಂದಲೂ ಐದು ವರ್ಷ ನಾನೇ ಸಿಎಂ ಎಂದು ಜಪಮಾಡುತ್ತಿರುವ ಸಿದ್ದರಾಮಯ್ಯ ಅವರು ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಮಾಡುತ್ತಿಲ್ಲ. ಎಲ್ಲೇ ಹೋದರೂ ಅದೊಂದನ್ನೇ ತಮ್ಮ ಮಂತ್ರದಂತೆಯೇ ಪಠಿಸುತ್ತಿದ್ದಾರೆ. ರಾಜ್ಯದ ಬಳಿಕ ದೆಹಲಿಗೆ ಹೋಗಿದ್ದ ವೇಳೆಯೂ ಸಿದ್ದು ಅದೇ ಮಾತನ್ನು ಪುನರುಚ್ಚರಿಸುವ ಮೂಲಕ ಡಿಸಿಎಂ ಡಿ.ಕೆ ಶಿವಕುಮಾರ್‌ ಅವರಿಗೆ ಶಾಕ್‌ ನೀಡಿದ್ದರು. ಈ ಬೆನ್ನಲ್ಲೇ ಡಿಕೆಶಿ ಮೌನಕ್ಕೆ ಶರಣಾಗಿದ್ದರು. ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಮತ್ತೆ ಹೈಕಮಾಂಡ್‌ ಭೇಟಿಯಾಗಿದ್ದಾರೆ.

ಸಿದ್ದರಾಮಯ್ಯ ತಮ್ಮ ನಾಯಕತ್ವವನ್ನು ಭದ್ರ ಮಾಡಿಕೊಳ್ಳುವ ನಿಟ್ಟಿನಲ್ಲಿ ಸಾಲು ಸಾಲು ಹೇಳಿಕೆಗಳನ್ನು ನೀಡುತ್ತಿದ್ದರೂ, ಇವುಗಳನೆಲ್ಲ ಡಿ.ಕೆ ಶಿವಕುಮಾರ್‌ ಸೈಲೆಂಟಾಗಿಯೇ ಗಮನಿಸುತ್ತಿದ್ದಾರೆ. ಹೇಳಿ ಕೇಳಿ ಹೈಕಮಾಂಡ್‌ ನಾಯಕರ ಎದುರು ಹಾಗೂ ಪಕ್ಷದಲ್ಲಿ ತಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಬೇಕೆಂಬ ತಂತ್ರಕ್ಕೆ ಮೊರೆ ಹೋಗಿರುವ ಅವರು ತಮ್ಮ ನಡೆಯಿಂದಲೇ ಎಲ್ಲವನ್ನೂ ಸಾಧಿಸಲು ಹೊರಟಿದ್ದಾರೆ.

ಸದ್ಯಕ್ಕೆ ಡಿಕೆಶಿ ಯಾವ ಹೆಜ್ಜೆ ಇಡಲಿದ್ದಾರೆ ಎನ್ನುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇನ್ನೂ ಡಿಸಿಎಂ ಡಿಕೆಶಿ ಯಾವ ನಡೆಯನ್ನು ಅನುಸರಿಸಬಹುದು ಎನ್ನುವುದು ಬಹಳಷ್ಟು ಮುಖ್ಯವಾಗಿದೆಯಾದರೂ ಉಭಯ ನಾಯಕರ ದೆಹಲಿ ಭೇಟಿಯ ಬಳಿಕ ಏನೆಲ್ಲ ಆಗಿದೆ ಎನ್ನುವುದನ್ನು ನೋಡಿದಾಗ ಪ್ರಮುಖವಾಗಿ ದೆಹಲಿಗೆ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್‌ ಇಬ್ಬರೂ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿಯವರನ್ನು ಮೀಟ್‌ ಮಾಡದೇ ವಾಪಸ್‌ ಆಗಿದ್ದರು. ಐದು ವರ್ಷ ನಾನೇ ಸಿಎಂ ಎಂದು ಸಿದ್ದು ಹೇಳಿಕೆಯ ಬಳಿಕ 2 ದಿನ ಡಿ.ಕೆ ಶಿವಕುಮಾರ್ ಸೈಲೆಂಟಾಗಿದ್ದರು. ಅಲ್ಲಿಂದ ವಾಪಸ್‌ ಬಂದ ಬಳಿಕ ಶಿರಡಿ ಸಾಯಿಬಾಬಾ ಮೊರೆ ಹೋಗಿದ್ದ ಡಿ.ಕೆ ಶಿವಕುಮಾರ್‌ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು.

ಅದರೆ ತುರ್ತಾಗಿ ದೆಹಲಿಗೆ ಬರುವಂತೆ ಹೈಕಮಾಂಡ್‌ ನಾಯಕರ ಕರೆಯ ಬಳಿಕ ಪುಣೆಯಿಂದಲೇ ನೇರವಾಗಿ ಅವರು ದೆಹಲಿ ವಿಮಾನ ಹತ್ತಿದ್ದಾರೆ. ಇನ್ನೂ ಅಚ್ಚರಿಯೆಂದರೆ ಈ ಎಲ್ಲ ಬೆಳವಣಿಗೆಗಳನ್ನು ಅಲ್ಲಗಳೆದಿರುವ ಡಿಸಿಎಂ ನನಗೆ ಹೈಕಮಾಂಡ್‌ ಯಾವುದೇ ಆಹ್ವಾನ ನೀಡಿಲ್ಲ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ತಾವು ಖಾಸಗಿ ಕಾರ್ಯಕ್ರಮದ ನಿಮಿತ್ತ ದೆಹಲಿಗೆ ಹೊರಟಿರುವುದಾಗಿ ಶಿವಕುಮಾರ್‌ ಹೇಳಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಸಿಎಂ ಬದಲಾವಣೆ ವಿಚಾರವಾಗಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನಡುವಿನ ಶೀತಲ‌ ಸಮರ ಕಾಂಗ್ರೆಸ್ ಹೈಕಮಾಂಡ್ ರಾಹುಲ್ ಗಾಂಧಿ ಅವರನ್ನು ಕೆರಳಿಸಿದೆ. ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳ ಅಸಮಾಧಾನ ಹೊರಹಾಕಿರುವ ರಾಹುಲ್ ಗಾಂಧಿ ಅವರು ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.