ಬೆಂಗಳೂರು:- ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗುರುವಾರ ಸಂಜೆ ದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ಸಭೆ ನಡೆಸಿದ್ದು, 22 ನಿಗಮಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ನೇಮಕ ಪಟ್ಟಿಯನ್ನು ಬಹುತೇಕ ಅಂತಿಮಗೊಳಿಸಿದ್ದಾರೆ.
ಈ ಪಟ್ಟಿಗೆ ಈ ಮಾಸಾಂತ್ಯದ ವೇಳೆಗೆ ಹೈಕಮಾಂಡ್ ಮುದ್ರೆ ಬೀಳುವ ಸಾಧ್ಯತೆಯಿದೆ. ಖಾಲಿ ಇರುವ ನಿಗಮ-ಮಂಡಳಿ ಸ್ಥಾನಗಳ ಪೈಕಿ 22 ನಿಗಮಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ನೇಮಕಕ್ಕೆ ಪಟ್ಟಿ ಅಂತಿಮಗೊಳಿಸಲಾಗಿದೆ. ಅಲ್ಲದೆ 950 ನಿರ್ದೇಶಕ/ಸದಸ್ಯರ ಸ್ಥಾನಗಳಲ್ಲಿ ಶೇ.70 ರಷ್ಟು ಸದಸ್ಯರ ಆಯ್ಕೆ ಪೂರ್ಣಗೊಂಡಿದ್ದು, ಉಳಿದ ಸದಸ್ಯರ ಆಯ್ಕೆಗೆ ಮತ್ತೊಂದು ಸುತ್ತಿನ ಸಭೆ ನಡೆಸುವ ನಿರೀಕ್ಷೆಯಿದೆ. ಹೀಗಾಗಿ ಮಾಸಾಂತ್ಯದ ಒಳಗಾಗಿ ಇಲಾಖಾವಾರು ನೇಮಕಾತಿ ಆದೇಶ ಹೊರ ಬೀಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ವಿಧಾನ ಪರಿಷತ್ ಸದಸ್ಯರ ನೇಮಕ ವಿಚಾರದಲ್ಲಿ ಈಗಲೇ ರಾಜ್ಯ ಕಾಂಗ್ರೆಸ್ ವತಿಯಿಂದ ನಾಲ್ಕು ಹೆಸರುಗಳನ್ನು ಅಂತಿಮಗೊಳಿಸಿ ಹೈಕಮಾಂಡ್‌ಗೆ ಕಳುಹಿಸಲಾಗಿದೆ. ಈ ಪಟ್ಟಿಯಲ್ಲಿರುವವರನ್ನೇ ನೇಮಕಾತಿ ಮಾಡಲಾಗುತ್ತದೆಯೇ ಎಂಬ ಕುರಿತು ಗೊಂದಲ ಮುಂದುವರೆದಿದ್ದು, ಹೈಕಮಾಂಡ್‌ನ ಅಂತಿಮ ನಿರ್ಧಾರದ ಬಗ್ಗೆ ಕುತೂಹಲ ಮೂಡಿದೆ.
ರಾಜ್ಯದಿಂದ ಕೆಪಿಸಿಸಿಯು ಡಾ.ಆರತಿ ಕೃಷ್ಣ, ರಮೇಶ್ ಬಾಬು, ದಿನೇಶ್ ಅಮಿನ್‌ಮಟ್ಟು, ಡಿ.ಜಿ.ಸಾಗರ್ ಅವರ ಹೆಸರನ್ನು ಅಂತಿಮಗೊಳಿಸಿ ವರಿಷ್ಠರಿಗೆ ಕಳುಹಿಸಿತ್ತು. ಈ ಪೈಕಿ ಆರತಿ ಕೃಷ್ಣ ಅವರ ಹೆಸರು ಬಹುತೇಕ ಖಚಿತವಾಗಿದೆ. ಉಳಿದ ಮೂರು ಹೆಸರುಗಳ ಪೈಕಿ ರಮೇಶ್ ಬಾಬು ಅವರು ಇತ್ತೀಚೆಗಷ್ಟೇ ಕಾಂಗ್ರೆಸ್‌ಗೆ ಸೇರಿಕೊಂಡವರು. ಉಳಿದ ಇಬ್ಬರೂ ಪಕ್ಷದಿಂದ ಹೊರಗಿನವರು ಎಂಬ ಆಕ್ಷೇಪಣೆಯನ್ನು ಕೆಲ ನಾಯಕರು ಮಾಡಿದ್ದಾರೆ. ಹೀಗಾಗಿ, ಈ ಬಗ್ಗೆ ಅಂತಿಮ ತೀರ್ಮಾನ ಹೈಕಮಾಂಡ್ ಅರ್ಥಾತ್ ರಾಹುಲ್ ಗಾಂಧಿ ಅವರೇ ಕೈಗೊಳ್ಳಬೇಕಿದೆ.
ಇಂದು ದೆಹಲಿಯಲ್ಲಿ ನಡೆಯಲಿರುವ ಒಬಿಸಿ ಸಮಾವೇಶದಲ್ಲಿ ರಾಹುಲ್‌ಗಾಂಧಿ ಅವರೊಂದಿಗೆ ಸಿದ್ದರಾಮಯ್ಯ ಮುಖಾಮುಖಿ ಆಗಲಿದ್ದಾರೆ. ಈ ವೇಳೆ ಭೇಟಿ ಸಾಧ್ಯವಾದರೆ ಪರಿಷತ್ ಸದಸ್ಯರ ನೇಮಕದ ಬಗ್ಗೆ ಚರ್ಚೆ ನಡೆದರೆ ಪಟ್ಟಿ ಬೇಗ ಅಂತಿಮಗೊಳ್ಳಲಿದೆ. ಇಲ್ಲದಿದ್ದರೆ, ರಾಹುಲ್ ಗಾಂಧಿ ಅವರು ಉಭಯ ನಾಯಕರೊಂದಿಗೆ ಯಾವಾಗ ಭೇಟಿ ಮಾಡುವರೋ ಆಗಲೇ ಪಟ್ಟಿಯ ಬಗ್ಗೆ ಅಂತಿಮ ತೀರ್ಮಾನವಾಗಲಿದೆ ಎಂದು ಹೈಕಮಾಂಡಿನ ಪಕ್ಷದ ಕಚೇರಿಯ ಮೂಲಗಳು.
Leave feedback about this