ಬೆಂಗಳೂರು:- ಖ್ಯಾತ ನಟ ಪ್ರಕಾಶ್ರಾಜ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೀದಿಗೆ ಇಳಿದಿದ್ದಾರೆ. ಅಲ್ಲದೇ ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಖಡಕ್ ತಿರುಗೇಟು ಕೊಟ್ಟಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆಯೂ ಪ್ರಕಾಶ್ ರಾಜ್ ಅವರು ರಾಜ್ಯ ಸರ್ಕಾರದ ವಿರುದ್ಧ ಪರೋಕ್ಷ ವಾಗ್ದಾಳಿಯನ್ನು ಮಾಡಿದ್ದರು. ಇದೀಗ ನೇರವಾಗಿಯೇ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆಯೂ ನಟ ಪ್ರಕಾಶ್ ರಾಜ್ ಅವರು ಮಾತನಾಡಿದ್ದಾರೆ.
ನಟ ಪ್ರಕಾಶ್ರಾಜ್ ಅವರು ದೇಶದ ವಿವಿಧ ಪ್ರಮುಖ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದು ಇದೆ. ಅಲ್ಲದೇ ಸಾಮಾಜಿಕ ನ್ಯಾಯ ಹಾಗೂ ರೈತಪರ ಹೋರಾಟಗಳಲ್ಲಿ ಭಾಗಿಯಾಗಿರುವುದು ಸಹ ಇದೆ. ಇಷ್ಟು ದಿನ ಅವರು ಬಿಜೆಪಿಯ ವಿಚಾರಗಳಲ್ಲಿ ಮಾತ್ರ ಕಠಿಣವಾಗಿ ಟೀಕಿಸುತ್ತಾರೆ ಅಥವಾ ಮೃಧು ಧೋರಣೆ ಅನುಸರಿಸುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಆದರೆ, ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಕಾಶ್ ರಾಜ್ ಅವರು ಹೋರಾಟಕ್ಕೆ ಮುಂದಾಗಿದ್ದಾರೆ. ದೇವನಹಳ್ಳಿಯಲ್ಲಿ ರೈತರ ಭೂಸ್ವಾಧೀನ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆದಿದೆ. ದೇವನಹಳ್ಳಿ ಚಲೋ ಪ್ರತಿಭಟನಾ ಸಭೆಯಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಭಾಗವಹಿಸಿದ್ದು. ರಾಜ್ಯ ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೇ ರೈತರ ಭೂಮಿಯಲ್ಲಿ ಕಾರ್ಖಾನೆಗಳನ್ನು ನಿರ್ಮಾಣ ಮಾಡುವುದನ್ನು ಬಲವಾಗಿ ಖಂಡಿಸಿದ್ದಾರೆ.
ಏನಿದು ಅನ್ಯಾಯ, ಯಾಕಿ ದೌರ್ಜನ್ಯ ಈ ಸರ್ಕಾರ ಯಾಕೆ ಈ ರೀತಿ ಆಗಿದೆ. ದೇವನಹಳ್ಳಿಯಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವ ರೈತರನ್ನು ಹಾಗೂ ಅವರ ಪರವಾಗಿ ನಿಂತ ಸಾಮಾಜಿಕ ಕಾರ್ಯಕರ್ತರನ್ನು ಅರೆಸ್ಟ್ ಮಾಡಿದ್ದೀರಿ. 80 ವರ್ಷದ ವೃದ್ಧೆ ಹಳ್ಳಿಯಿಂದ ತಮ್ಮ ಮಣ್ಣಿಗಾಗಿ ಬಂದಿದ್ದಾರೆ. ಯಾಕೆ ಅವರನ್ನು ಬಂಧಿಸಿದ್ದೀರಿ ಅವರು ದುಡ್ಡಿನ ಆಸೆಗೆ ಅಲ್ಲಿ ಬಂದು ಹೋರಾಟ ಮಾಡುತ್ತಿಲ್ಲ. ಇನ್ನೊಬ್ಬರ ಸ್ಥಳ ಅಥವಾ ಆಸ್ತಿಯನ್ನೊ ಕಬ್ಜ ಮಾಡುವುದಕ್ಕೋ ಅಲ್ಲಿ ಬಂದಿಲ್ಲ ಎಂದು ನಟ ಪ್ರಕಾಶ್ ರಾಜ್ ಅವರು ತಿರುಗಿ ಬಿದ್ದಿದ್ದಾರೆ. ತಮ್ಮ ಮಣ್ಣು, ಬದುಕು ಮತ್ತು ಭೂಮಿಯನ್ನು ನಮಗೆ ಬಿಟ್ಟುಕೊಡಿ ಕಿತ್ತುಕೊಳ್ಳಬೇಡಿ ಎಂದು ಅವರ ಹಕ್ಕನ್ನು ಕೇಳುವುದಕ್ಕೆ ಬಂದಿದ್ದಾರೆ.
ಒಬ್ಬ ಮನುಷ್ಯರಿಗೆ ಒಂದು ಸಲ ಹೇಳಬಹುದು, ಎರಡು ಸಲ ಹೇಳಬಹುದು. ಮೂರು ವರ್ಷ ಬಾಯಿ ಬಡೆದುಕೊಳ್ಳಬೇಕೇನ್ರಿ. ನಿಮಗೆ ಅರ್ಥ ಆಗಬೇಕು. ನೀವು ಗೆದ್ದಿಲ್ಲ. ಭಾರತದ ರಾಜಕಾರಣದಲ್ಲಿ ಪಕ್ಷಗಳು, ವ್ಯಕ್ತಿಗಳು ಗೆಲ್ಲುವುದಿಲ್ಲ. ಜನ ಅವರನ್ನು ಗೆಲ್ಲಿಸುತ್ತಾರೆ. ನೀವು ಆಳ್ವಿಕೆ ಮಾಡುವುದಕ್ಕೆ ಇಲ್ಲಿ ಬಂದಿಲ್ಲ. ಪ್ರತಿನಿಧಿಸುವುದಕ್ಕೆ ಬಂದಿದ್ದೀರಿ ಅಷ್ಟೇ ಎಂದಿದ್ದಾರೆ.