ಬೆಂಗಳೂರು:- ಪ್ರತಿಷ್ಠಿತ ಗಾಳಿ ಆಂಜನೇಯ ದೇಗುಲವನ್ನು ಮುಜುರಾಯಿ ಇಲಾಖೆ ಸುಪರ್ದಿಗೆ ತೆಗೆದುಕೊಂಡ ನಂತರ ದೇವಸ್ಥಾನದ ಆಡಳಿತ ಮಂಡಳಿ ಸಿಡಿದೆದ್ದಿದೆ.
ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ ನೀಡಿ, ಇದು ತಾತ್ಕಾಲಿಕ, 5 ವರ್ಷದ ನಂತರ ದೇಗುಲವನ್ನು ಟ್ರಸ್ಟ್‌ಗೆ ವಾಪಸ್ ಕೊಡುತ್ತೇವೆ ಎಂದಿದ್ದಾರೆ. ಗಾಳಿ ಆಂಜನೇಯ ಸ್ವಾಮಿ ದೇಗುಲದಲ್ಲಿ ಹಣ ದುರುಪಯೋಗ ಆಗಿದೆ. ಹೀಗಾಗಿ ಈ ಕ್ರಮಕೈಗೊಂಡಿದ್ದೇವೆ. ಯಾವುದೇ ದೇವಸ್ಥಾನದಲ್ಲಿ ಹಣಕಾಸಿನ ದುರುಪಯೋಗವಾದರೆ ಅದನ್ನು ವಶಕ್ಕೆ ಪಡೆದುಕೊಳ್ಳುವ ಅಧಿಕಾರ ಸರ್ಕಾರಕ್ಕಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಸುಮಾರು 10 ದೇವಾಲಯಗಳನ್ನು ವಶಕ್ಕೆ ಪಡೆದುಕೊಂಡಿತ್ತು ಎಂದು ಹೇಳಿದರು. ಮೈಸೂರು ರಸ್ತೆಯ ಬ್ಯಾಟರಾಯನಪುರದಲ್ಲಿರುವ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹುಂಡಿ ಹಣ ಎಣಿಕೆಯ ಸಂದರ್ಭದಲ್ಲಿ ಸಿಬ್ಬಂದಿಯೇ ಕಳ್ಳತನ ಮಾಡಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.