ಚಿಕ್ಕಮಗಳೂರು:- ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ ಮತ್ತು ಸೌಜನ್ಯ ಕೇಸ್ ಗೆ ಸಂಬಂಧಪಟ್ಟಂತೆ ದಿನನಿತ್ಯ ಸೋಶಿಯಲ್ ಮೀಡಿಯಾದಲ್ಲಿ ಕೂತು ಆರೋಪಗಳ ಸುರಿಮಳೆಗೈಯುವ ಗಿರೀಶ್ ಮಟ್ಟಣ್ಣವರ್ ವಿರುದ್ಧ ರಾಜ್ಯ ಬ್ರಾಹ್ಮಣ ಅರ್ಚಕರು ಹಾಗೂ ಪುರೋಹಿತ ಪರಿಷತ್ ಸಿಡಿದೆದ್ದಿದ್ದು, ಪರಿಷತ್ ನ ಉಪಾಧ್ಯಕ್ಷ ರಘುಪತಿ ಭಟ್ ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ಗಿರೀಶ್ ಮಟ್ಟಣ್ಣವರ್ ವಿರುದ್ಧ ರಘುಪತಿ ಭಟ್ ಗಂಭೀರ ಆರೋಪ ಮಾಡಿದ್ದು, ಈತ ನಕ್ಸಲ್ ಪೀಡಿತ ಅರಣ್ಯ ಪ್ರದೇಶದಲ್ಲಿ ದೊಡ್ಡ ರೆಸಾರ್ಟ್ ನಿರ್ಮಾಣ ಮಾಡಿದ್ದಾನೆ. ಆದರೆ, ಇದಕ್ಕೆಲ್ಲಾ ಈತನಿಗೆ ಎಲ್ಲಿಂದ ಹಣ ಬಂತು? ಈತನ ಆದಾಯದ ಮೂಲವೇನು ಎಂದು ರಾಜ್ಯ ಬ್ರಾಹ್ಮಣ ಅರ್ಚಕರು ಹಾಗೂ ಪುರೋಹಿತ ಪರಿಷತ್‌ನ ಉಪಾಧ್ಯಕ್ಷ ರಘುಪತಿ ಭಟ್ ಆರೋಪಿಸಿದ್ದಾರೆ. ಈ ಕುರಿತು ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಗಿರೀಶ್ ಮಟ್ಟಣ್ಣವರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸೌಜನ್ಯ ಪರ ಹೋರಾಟಗಾರ ಎಂದು ಬಿಂಬಿಸಿಕೊಳ್ಳುವ ಈ ಗಿರೀಶ್, ಶೃಂಗೇರಿ ಸಿರಿಮನೆ ಫಾಲ್ಸ್ ಸಮೀಪ ಹತ್ತಾರು ಎಕರೆಯಲ್ಲಿ ದೊಡ್ಡ ರೆಸಾರ್ಟ್ ನಿರ್ಮಿಸಿದ್ದಾನೆ. ಇಷ್ಟೊಂದು ಆದಾಯ ಈತನಿಗೆ ಎಲ್ಲಿಂದ ಬಂತು ? ಹೌದು ಸಿರಿಮನೆ, ಕಿಗ್ಗಾ, ಬುಕ್ಕಡಿಬೈಲ್ ಸುತ್ತಮುತ್ತಲಿನ ಪ್ರದೇಶ ನಕ್ಸಲ್ ಪೀಡಿತ ಪ್ರದೇಶ, ಈ ನಕ್ಸಲ್ ಪೀಡಿತ ಜಾಗದಲ್ಲಿ ಗಿರೀಶ್ ದೊಡ್ಡ ರೆಸಾರ್ಟ್ ಮಾಡಿದ್ದಾನೆ. ರಾಜ್ಯ ಸರ್ಕಾರ ಅದಿವಾಸಿಗಳಿಗೆ ನೀಡಿದ ವಸತಿ ಪ್ರದೇಶದಲ್ಲಿ ರೆಸಾರ್ಟ್ ಮಾಡಿದ್ದಾನೆ, ಇಷ್ಟೆಲ್ಲಾ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಧರ್ಮಸ್ಥಳದ ವಿರುದ್ಧದ ಹೋರಾಟದ ಹಿಂದೆ ವ್ಯವಸ್ಥಿತ ಪಿತೂರಿಯಿದೆ, ಎಡಪಂಥೀಯರ ಗುಂಪು ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಪಿತೂರಿ ರೂಪಿಸಿದೆ. ಹೀಗಾಗಿ ಈ ಎಲ್ಲಾ ಆರೋಪಗಳು ನಮ್ಮ ಧರ್ಮಸ್ಥಳ ಹಾಗೂ ಹಿಂದೂ ಧರ್ಮದ ಮೇಲೆ ಆಗುತ್ತಿರುವ ಗದಾ ಪ್ರಹಾರ ಎಂದಿದ್ದಾರೆ. ಇದೊಂದು ಭಯೋತ್ಪಾದನೆಗೆ ಸಮಾನದ ಕೃತ್ಯ. ದೇಶ ವಿರೋಧಿಗಳು, ಮತಾಂದರು ಹಿಂದೂಗಳ ಮೇಲೆ ಈ ರೀತಿ ಭಯೋತ್ಪಾದನೆ ಮಾಡ್ತಿದ್ದಾರೆ ಎಂದರು.
ಇನ್ನು ಈ ಎಡಪಂತೀಯ ಗುಂಪು ನಮ್ಮ ಧಾರ್ಮಿಕ ಶ್ರದ್ಧೆಯ ಕ್ಷೇತ್ರದ ವಿರುದ್ಧ ಅನವಶ್ಯಕ ಆರೋಪ ಮಾಡುತ್ತಿದೆ. ಧರ್ಮಸ್ಥಳದ ಮೇಲಿನ ಆರೋಪದ ಸಂಬಂಧ ಎಸ್‌ಐಟಿ ತನಿಖೆ ಮಾಡಲಿ. ಅದರ ಬಗ್ಗೆ ನಮ್ಮ ವಿರೋಧ ಇಲ್ಲ, ಕಾನೂನು ಪ್ರಕಾರ ಸಂಪೂರ್ಣ ತನಿಖೆಯಾಗಲಿ. ಯಾರೋ ಅನಾಮಿಕ ತಲೆಬುರುಡೆ ತಂದ ತಕ್ಷಣ ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿದೆ. ಯಾರಿಗಾದರೂ ಸಾವಿರಾರು ಅಥವಾ ನೂರಾರು ಹೆಣ ಹೂಳಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
Leave feedback about this