ಚಿಕ್ಕಮಗಳೂರು

ಗುಣ ಮಟ್ಟದ ಶಿಕ್ಷಣಕ್ಕೆ ಸರ್ಕಾರವು ಮೊದಲ ಆದ್ಯತೆ ನೀಡುತ್ತಿದೆ. – ಡಾ.ಕೆ.ಪಿ.ಅಂಶುಮಂತ್

ಚಿಕ್ಕಮಗಳೂರು:- ಸರ್ಕಾರವು ಗುಣಮಟ್ಟದ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುತ್ತಿದೆ ಎಂದು ಶಿವಮೊಗ್ಗ ಭದ್ರಾ ಕಾಡಾ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ತಿಳಿಸಿದರು. ಅವರು ಇಂದು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿಯ ಗುಳ್ಳದಮನೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ದಾನಿಗಳು ಹಾಗೂ ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಯ ಅನುದಾನ ಸೇರಿ ಅಂದಾಜು 10 ಲಕ್ಷ ರುಪಾಯಿ ವೆಚ್ಚದಲ್ಲಿ ನವೀಕರಿಸಿದ ಶಾಲಾ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದರು.

ಮಾತು ಮುಂದುವರೆಸಿದ ಅಂಶುಮಂತ್ ರವರು, ಮಕ್ಕಳಿಲ್ಲದೆ ಮುಚ್ಚುವ ಹಂತ ತಲುಪಿದ್ದ ಗುಳ್ಳದ ಮನೆ ಸರ್ಕಾರಿ ಶಾಲೆಯಲ್ಲಿ ಮುಖ್ಯೋದ್ಯಾಯಿನಿ ಶಿಲ್ಪಕುಮಾರಿ ಶ್ರಮದಿಂದ ಮಕ್ಕಳ ಸಂಖ್ಯೆ ಜಾಸ್ತಿ ಮಾಡಿ, ಶಾಲೆಯನ್ನೂ ಸಹ ನವೀಕರಿಸಿರುವುದು ಗ್ರಾಮಸ್ಥರ ಸಂಭ್ರಮಕ್ಕೆ ಕಾರಣವಾಗಿದೆ. ಒಮ್ಮೆ ಸರ್ಕಾರಿ ಶಾಲೆ ಮುಚ್ಚಿದರೆ ಮತ್ತೆ ಪ್ರಾರಂಭಿಸುವುದು ಕಷ್ಟಕರವಾಗಲಿದೆ. ಹಳೇ ವಿದ್ಯಾರ್ಥಿ ಸಂಘ ಈ ಶಾಲೆಯ ಪುನಶ್ಚೇತನಕ್ಕೆ ಕೈ ಜೋಡಿಸಿದೆ, ಮಕ್ಕಳ ಶಿಕ್ಷಣದ ವ್ಯವಸ್ಥೆ ಬಂದಾಗ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಎಲ್ಲರೂ ಕೈಜೋಡಿಸಬೇಕು. ಗುಳ್ಳದಮನೆಯು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ ಎಂದರು.

ಮುಖ್ಯ ಅಥಿತಿಯಾಗಿ ಆಗಮಿಸಿದ ಕಣಿವೆ ನಾಗಚಂದ್ರ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ದಾನಿ ಕಣಿವೆ ವಿನಯ್ ಮಾತನಾಡಿ, ಸರ್ಕಾರಿ ಶಾಲೆಗೆ ಹೋಗುವ ಮಕ್ಕಳಿಗೆ ಸದಾ ಪೋಷಕರ ಸಂಪರ್ಕ ಇರುವುದರಿಂದ ಅಂತಹ ಮಕ್ಕಳಿಗೆ ಮನೆಯ, ಕುಟುಂಭದ ಸಂಸ್ಕಾರಯುತ ಶಿಕ್ಷಣ ಸಹ ಸಿಗಲಿದೆ. ನಮ್ಮ ನಾಗಚಂದ್ರ ಪ್ರತಿಷ್ಠಾನದಿಂದ ಗುಳ್ಳದಮನೆ ಸರ್ಕಾರಿ ಶಾಲೆಗೆ ಸ್ಮಾರ್ಟ್ ಕ್ಲಾಸ್ ನೀಡಿದ್ದು, ಈ ಹಿಂದೆ ವಿವಿಧ 2 ಸರ್ಕಾರಿ ಶಾಲೆಗಳಿಗೂ ಸಹ ಸ್ಮಾರ್ಟ್ ಕ್ಲಾಸ್ ನೀಡಿದ್ದೇವೆ ಎಂದರು.

ಗುಳ್ಳದಮನೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಸ್.ಎಸ್.ಸಂತೋಷಕುಮಾರ್ ಮಾತನಾಡಿ,1969ರಲ್ಲಿ ಗುಳ್ಳದಮನೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪ್ರಾರಂಭವಾಗಿತ್ತು. ಗುಳ್ಳದಮನೆ ಮಂಜಪ್ಪ ಗೌಡರು ಶಾಲೆಗಾಗಿ ಜಾಗ ನೀಡಿದ್ದರು. ಕಳೆದ ಸಾಲಿನಲ್ಲಿ ಮಕ್ಕಳಿಲ್ಲದೆ ಶಾಲೆ ಮುಚ್ಚುವ ಹಂತ ಬಂದಾಗ ಮುಖ್ಯೋಪಾಧ್ಯಾಯಿನಿ ಆಗಮಿಸಿದ ಶಿಲ್ಪ ಕುಮಾರಿ ಅವರು ದಾನಿಗಳ ಸಹಕಾರದಿಂದ ಶಾಲೆಗೆ ಹೊಸ ರೂಪ ನೀಡಿ ಮಕ್ಕಳ ಸಂಖ್ಯೆ ಹೆಚ್ಚಿಸಿದ್ದಾರೆ ಎಂದರು.

ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಸ್.ಎಸ್.ಶಾಂತಕುಮಾರ್ ಮಾತನಾಡಿ, ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ಮಕ್ಕಳ ಸಂಖ್ಯೆ ಕಡಿಮೆಯಾಗಿ ಆಲಂದೂರು, ಸೌತಿಕೆರೆ ಶಾಲೆ ಮುಚ್ಚಲಾಗಿದೆ. ಶಿಕ್ಷಕರಿಗೆ ಬದ್ದತೆ ಇದ್ದರೆ ಶಾಲೆಯನ್ನು ಹೇಗೆ ಅಭಿವೃದ್ದಿ ಪಡಿಸುತ್ತಾರೆ ಎಂಬುದಕ್ಕೆ ಮುಖ್ಯ ಶಿಕ್ಷಕಿ ಶಿಲ್ಪಕುಮಾರಿ ಮಾದರಿಯಾಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಶಾಲೆಯ ಅಭಿವೃದ್ದಿಗೆ ಶ್ರಮಿಸಿದ ಗುಳ್ಳದಮನೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಧ್ಯಾಯಿನಿ ಶಿಲ್ಪಕುಮಾರಿ ಅವರನ್ನು ಸನ್ಮಾನಿಸಲಾಯಿತು. 80ಕ್ಕೂ ಹೆಚ್ಚು ದಾನಿಗಳನ್ನು ಅಭಿನಂದಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಕಡಹಿನಬೈಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ ವಹಿಸಿದ್ದರು. ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಚಂದ್ರಶೇಖರ್, ಎ.ಬಿ.ಮಂಜುನಾಥ್, ಲಿಲ್ಲಿ ಮಾತುಕುಟ್ಟಿ, ವಾಣಿ ನರೇಂದ್ರ, ಶೈಲಾ ಮಹೇಶ್, ರವೀಂದ್ರ, ಗುಳ್ಳದಮನೆ ಚರ್ಚಿನ ಫಾ.ಜೋಬೀಸ್, ದಾನಿಗಳಾದ ಗುಳದಮನೆ ಪ್ರಕಾಶ್, ಗಾಂಧಿಗ್ರಾಮ ನಾಗರಾಜ್, ವಿಂದ್ಯಾ ಹೆಗಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್.ಪುಷ್ಪ, ಹಳೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ವಿಲ್ಸನ್, ಪಿ.ಡಿ.ಓ.ವಿಂದ್ಯಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್, ತಾ.ಪ್ರಾ.ಶಾಲಾ ಶಿ.ಸಂಘದ ಅಧ್ಯಕ್ಷ ನಂಜುಂಡಪ್ಪ, ಭಡ್ತಿ ಮುಖ್ಯೋಧ್ಯಾಯರ ಸಂಘದ ರಾಜ್ಯ ಉಪಾಧ್ಯಕ್ಷ ಅಶೋಕ್, ಶಿಕ್ಷಣ ಇಲಾಖೆಯ ರಮೇಶ ನಾಯ್ಕ್, ರಂಗಪ್ಪ, ಸಂಗೀತ, ಓಂಕಾರಪ್ಪ, ತಿಮ್ಮಮ್ಮ, ಪುಷ್ಪಕುಮಾರ್, ರಮೇಶನಾಯ್ಕ, ತಿಮ್ಮೇಶಪ್ಪ ಉಪಸ್ಥಿತರಿದ್ದರು.