ಚಿಕ್ಕಮಗಳೂರು:- ಡಾ.ರಾಜಕುಮಾರ್ ಎಂದಿಗೂ ರಾಜಕೀಯದಲ್ಲಿ ಆಸಕ್ತಿ ತೋರಲೇ ಇಲ್ಲ, ರಾಜಕೀಯರಂಗಕ್ಕೆ ಧುಮುಕಿದರೆ ರಾಜ್ಯದ ಮುಖ್ಯಮಂತ್ರಿ ಆಗುವ ಅವಕಾಶ ಕೂಡ ರಾಜ್‌ಕುಮಾರ್ ಅವರ ಬಳಿ ಇತ್ತು ಎಂದು ಅಂದಿನ ರಾಜಕೀಯ ಪಂಡಿತರು ಹೇಳುತ್ತಿದ್ದರು.
ದೇಶದಲ್ಲಿ ತುರ್ತು ಪರಿಸ್ಥಿತಿಯ ನಂತರ 1978ರ ಲೋಕಸಭಾ ಉಪ ಚುನಾವಣೆ ನಡೆಯುತ್ತದೆ, ಚಿಕ್ಕಮಗಳೂರು ಕ್ಷೇತ್ರದಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕಣಕ್ಕಿಳಿಯುತ್ತಾರೆ. ಅಂದು ಅವರ ವಿರುದ್ಧ ಡಾ.ರಾಜ್‌ಕುಮಾರ್ ಅವರನ್ನು ಕಣಕ್ಕಿಳಿಸಲು ಜನತಾ ಪಕ್ಷ ತಂತ್ರ ರೂಪಿಸಿತ್ತು. ಆದರೆ, ರಾಜ್‌ಕುಮಾರ್ ಅದಕ್ಕೆ ಒಪ್ಪಲಿಲ್ಲ. ಮುಂದೆ ಇಂದಿರಾಗಾಂಧಿ ಚಿಕ್ಕಮಗಳೂರು ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸುತ್ತಾರೆ. ಅಂದು ರಾಜ್‌ಕುಮಾರ್ ಸ್ಪರ್ಧಿಸಿದ್ದರೆ ಇಂದಿರಾ ಅವರಿಗೆ ಸೋಲು ಖಚಿತವಾಗಿತ್ತು, ಅನಾಯಾಸವಾಗಿ ರಾಜ್‌ಕುಮಾರ್ ಗೆಲ್ಲುತ್ತಿದ್ದರು ಎಂದು ರಾಜಕೀಯ ವಿಶ್ಲೇಷಣೆಯೊಂದು ಹೇಳುತ್ತದೆ.
ಚಿಕ್ಕಮಗಳೂರಿನಲ್ಲಿ ಇಂದಿರಾ ಗಾಂಧಿ ಎದುರು ಚುನಾವಣೆಯಲ್ಲಿ ರಾಜ್‌ಕುಮಾರ್ ಸ್ಪರ್ಧಿಸಲು ಒಪ್ಪಿರಲಿಲ್ಲ, ಚಿಕ್ಕಮಗಳೂರು ಜಿಲ್ಲೆ ಇಂದಿರಾ ಗಾಂದ ಮುಂದೆ ಇಂದಿರಾ ಗಾಂಧಿ ದೇಶದ ಪ್ರಧಾನಿಯಾದರು. ಆ ಸಮಯದಲ್ಲಿ ಇಂದಿರಾ ಗಾಂಧಿ ರಾಜ್‌ಕುಮಾರ್ ಅವರನ್ನು ಭೇಟಿಯಾದರಂತೆ. ಈ ವೇಳೆ ಇಂದಿರಾ ಗಾಂಧಿ ಅಣ್ಣಾವ್ರ ಬಳಿ ಕ್ಷಮೆ ಕೇಳಬೇಕಾದ ಸನ್ನಿವೇಶ ಒಂದು ಎದುರಾಗಿತ್ತು ಎಂದು ಪಾರ್ವತಮ್ಮ ರಾಜ್‌ಕುಮಾರ್ ಅವರ ಸಹೋದರ ಚಿನ್ನೇಗೌಡ್ರು ಯೂಟ್ಯೂಬ್ ಚಾನೆಲ್ ಒಂದರ ಸಂದರ್ಶದಲ್ಲಿ ಈ ವಿಚಾರವನ್ನು ನೆನಪಿಸಿಕೊಂಡಿದ್ದಾರೆ.
ಅಂದು ಚಿಕ್ಕಮಗಳೂರು ಉಪ ಚುನಾವಣೆಯಲ್ಲಿ ಇಂದಿರಾ ಗಾಂಧಿ ಎದುರು ರಾಜ್‌ಕುಮಾರ್ ಅವರನ್ನು ನಿಲ್ಲಿಸಬೇಕೆಂದು ಜಾರ್ಜ್ ಫರ್ನಾಂಡಿಸ್ ಶತ ಪ್ರಯತ್ನ ಮಾಡಿದರೂ ಅದು ಸಾಧ್ಯವಾಗಲಿಲ್ಲ. 8 ದಿನ ಯಾರ ಸಂಪರ್ಕ ಇಲ್ಲದೇ ರಾಜ್ ಕುಮಾರ್ ಅಜ್ಞಾತದಲ್ಲಿ ತಿರುಗಾಡಿದ್ದರು ಆಗ ಅವರ ಜೊತೆಯಲ್ಲೇ ನಾನೂ ಇದ್ದೆ. ಬೇರೆಯವರು ನಾಮಪತ್ರ ಸಲ್ಲಿಸಿದ ಬಳಿಕ ರಾಜ್ ಕುಮಾರ್ ವಾಪಸ್ ಬಂದರು ಎಂದಿದ್ದಾರೆ.
ರಾಜ್ ಕುಮಾರ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಬಂದಾಗ ಇಂದಿರಾ ಗಾಂಧಿ ಆಹ್ವಾನಿಸಿದ್ದರು. ಅವತ್ತು ಇಂದಿರಾ ಗಾಂಧಿ ಭೇಟಿಗೆ ನಾನು, ನಮ್ಮಕ್ಕ ಪಾರ್ವತಮ್ಮ, ನಿರ್ದೇಶಕ ಭಗವಾನ್ ಹಾಗೂ ರಾಜ್ ಕುಮಾರ್ ಹೋಗಿದ್ದೆವು. ಇಂದಿರಾ ಗಾಂಧಿ ಅವರು ಬರುವುದು 10 ನಿಮಿಷ ತಡವಾಗುತ್ತಿತ್ತು. ಆದರೂ ಕಾದೆವು. ಕೊನೆಗೆ ಬಂದರು. ಒಳಗ ಹೋದ ಕೂಡಲೇ ಇಂದಿರಾಗಾಂಧಿ ಬಂದು ಕೈಹಿಡಿದು “ರಾಜ್‌ಕುಮಾರ್ ಜೀ, ಆಪ್ ಕ್ಷಮಾ ಕರೊ” ಎಂದು ರಾಜ್ ಕುಮಾರ್ ಬಳಿ ಕ್ಷಮೆ ಕೇಳಿದ ಬಳಿಕ ಕೂರಿಸಿ ಮಾತನಾಡಿದರು. ಪಾಲಿಟಿಕ್ಸ್‌ಗೆ ಬರ್ತೀರಾ? ಎಂದು ಇಂದಿರಾ ಗಾಂಧಿ ಅವರೇ ರಾಜ್ ಕುಮಾರ್ ಅವರನು ಕೇಳಿದ್ದರು. ಇಲ್ಲ ಏನು ಬೇಡ. ನಾನು ಕಲಾವಿದನಾಗಿಯೇ ಇರ್ತೀನಿ ಎಂದು ರಾಜ್‌ಕುಮಾರ್ ಹೇಳಿದ್ದರು ಎಂದು ಚಿನ್ನೇಗೌಡ್ರು ನೆನಪಿಸಿಕೊಂಡಿದ್ದಾರೆ.
ಇದೇ ಜಿಲ್ಲೆಯವರಾದ ಮಾಜಿ ಸಚಿವ ಡಿ.ಬಿ.ಚಂದ್ರೇಗೌಡರು 1971ರಲ್ಲಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದರು. 1977 ರಲ್ಲಿ ಎರಡನೇ ಅವಧಿಗೆ ಲೋಕಾಸಭೆಗೆ ಮರು ಪ್ರವೇಶ ಪಡೆದು 1978ರಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಲೆಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಇಂದಿರಾ ಗಾಂಧಿಯವರಿಗೆ ಚಿಕ್ಕಮಗಳೂರಿನಿಂದ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟು ಇಂದಿರಾಗಾಂಧಿಯವರಿಗೆ ಸಹಕಾರ ನೀಡಿದ್ದರು.
ಗ್ರಾಮೀಣಾಭಿವೃದ್ಧಿ ಸಚಿವ ಬೇಗಾನೆ ರಾಮಯ್ಯನವರು ಕೂಡ ಇಂದಿರಾಗಾಂಧಿಯವರೊಂದಿಗೆ ಪ್ರಚಾರದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡು ಗೆಲುವಿಗೆ ಸಹಕಾರ ನೀಡಿದ್ದರು.