ಚಾಮರಾಜನಗರ:- ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಚೌಡಳ್ಳಿ ವಿರಕ್ತ ಮಠದ ಮಠಾಧೀಪತಿ ಮುಸ್ಲಿಂ ವ್ಯಕ್ತಿ ಎನ್ನುವ ಹಿನ್ನಲೆಯಲ್ಲಿ ಗ್ರಾಮಸ್ಥರು ನಿಜಲಿಂಗ ಸ್ವಾಮಿಜಿ ಎನ್ನುವ ಹೆಸರಿನ ಮುಸ್ಲಿಂ ವ್ಯಕ್ತಿಯನ್ನು ಪೀಠದಿಂದ ಕೆಳಗಿಳಿಸಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಆದರೆ, ಇದರ ಹಿಂದೆ ಹಲವು ರೋಚಕ ಅಂಶಗಳು ಹೊರ ಬರುತ್ತಿವೆ.
ನಿಜಲಿಂಗ ಸ್ವಾಮಿಯ ಹುಟ್ಟೂರು ಯಾದಗಿರಿ ಜಿಲ್ಲೆಯ ಶಹಾಪೂರ ಅಲ್ಲ. ಇವರ ಹುಟ್ಟೂರು ಇರೋದು ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ರಾಜಾಪೂರ ಗ್ರಾಮವಾಗಿದೆ. ರಾಜಾಪೂರ ಗ್ರಾಮದ ಮೆಹಬೂಬ್ ಸಾಬ್ ಮತ್ತು ರೆಹನಾ ಬೇಗಂ ದಂಪತಿಗಳ ಪುತ್ರನಾಗಿದ್ದಾದ್ದು, ಇವರ ಪೂರ್ವಾಶ್ರಮದ ಹೆಸರು ಮೊಹ್ಮದ್ ನಿಸಾರ್ ಆಗಿದೆ.
ರಾಜಾಪೂರದ ಗ್ರಾಮದಲ್ಲಿಯೇ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿರುವ ಮೊಹ್ಮದ್ ನಿಸಾರ್ ಉರ್ದು ಮಾಧ್ಯಮದಲ್ಲಿ ಓದಿದ್ದಾರೆ. ನಂತರ ಲಿಂಗಪೂಜೆಯತ್ತ ಒಲವು ಹೆಚ್ಚಳಗೊಂಡ ಪರಿಣಾಮ ಮನೆಯಲ್ಲಿಯೇ ಲಿಂಗ ಪೂಜೆ ಮಾಡಲು ಶುರು ಮಾಡಿಕೊಂಡರು.
ಮುಸ್ಲಿಂ ಧರ್ಮ ಪಾಲನೆಯ ನಮ್ಮ ಮನೆಯಲ್ಲಿ ಲಿಂಗ ಪೂಜೆ ಮಾಡಬೇಡ ಎಂದು ಹೆತ್ತವರ ಎಚ್ಚರಿಕೆ ನೀಡಿದರು. ಇದರಿಂದ ಬೇಸರಗೊಂಡು ಎಂಟನೇ ತರಗತಿಯ ಸಮಯದಲ್ಲಿ ಮನೆ ತೊರೆದು ಹೋಗಿದ್ದಾನೆ ಎನ್ನುತ್ತಾರೆ ಅವರ ತಾಯಿ ರಹೆನಾ ಬೇಗಂ.
ನನ್ನ ಗಂಡ ಸತ್ತಾಗಲೂ ಮಗ ಮನೆಗೆ ಬರಲಿಲ್ಲ, ನನ್ನ ಮಗಳ ಮದುವೆ ಸಮಯದಲ್ಲೂ ಮಗ ಮನೆಗೆ ಬರಲಿಲ್ಲ. ಆತ ಕಾವಿ ಬಟ್ಟೆ ಹಾಕಿಕೊಂಡು ಬಸವಕಲ್ಯಾಣದಲ್ಲಿ ಇದ್ದಾನೆವೆನ್ನುವುದು ಬೇರೆಯವರ ಮೂಲಕ ಗೊತ್ತಾಯಿತು. ಕೂಡಲೇ ಬಸವಕಲ್ಯಾಣ ಹೋಗಿ ನೋಡಿದ್ರೆ ಕಾವಿ ತೊಟ್ಟು ನಿಂತಿದ್ದ. ಆಗಲೇ ನನ್ನ ಮಗ ನನ್ನ ಪಾಲಿಗೆ ಸತ್ತಿದ್ದಾನೆ ಎಂದುಕೊಂಡು ಬಿಟ್ಟಿದ್ದೇವೆ ಎನ್ನುತ್ತಾರೆ.
ಈಗಲೂ ಅವನು ಮರಳಿ ಮನೆಗೆ ಬಂದರೆ ಸ್ವೀಕರಿಸುವುದಿಲ್ಲ. ನಾವು ಹುಟ್ಟಿ ಬೆಳೆದ ಮುಸ್ಲಿಂ ಧರ್ಮ ಬಿಟ್ಟು ಬೇರೆ ಧರ್ಮದ ದಾರಿ ಹಿಡಿದಿದ್ದಾನೆ.ಬೇರೆ ಧರ್ಮ ಪಾಲಿಸ್ತಿದಾನೆ ಎಂದ ಮೇಲೆ ಅವನನ್ನು ಮರಳಿ ನಮ್ಮ ಮನೆಗೆ ಸೇರಿಸಿಕೊಳ್ಳುವ ಪ್ರಶ್ನೇಯೇ ಇಲ್ಲ. ನಾನು ತಾಯಿಯಾಗಿ ಒಪ್ಪಿದರೂ ನಮ್ಮ ಜನ ಒಪ್ಪಬೇಕಲ್ಲ.. ಹಾಗಾಗಿ ನಾನು ಮರಳಿ ಮಗ ಎಂದು ಸ್ವೀಕರಿಸಲಾರೆ ಎಂದು ನಿಜಲಿಂಗ ಸ್ವಾಮಿ ಅಲಿಯಾಸ್ ಮೊಹ್ಮದ್ ನಿಸಾರ್ ತಾಯಿ ರೆಹನಾ ಬೇಗಂ ಹೇಳಿಕೆ ನೀಡುತ್ತಾರೆ.
Leave feedback about this