ಬೆಂಗಳೂರು:- ಜಾತಿಗಣತಿ ಕಾಂತರಾಜ್ (ಜಯಪ್ರಕಾಶ್ ಹೆಗ್ಡೆ) ವರದಿಯಲ್ಲಿನ ದತ್ತಾಂಶದ ಬಗ್ಗೆ ಕಾಂಗ್ರೆಸ್ ವಲಯದಲ್ಲೇ ವಿರೋಧ ವ್ಯಕ್ತವಾಗಿತ್ತು. ಎಷ್ಟೋ ಕಾರ್ಯಕರ್ತರು ಮತ್ತು ಸ್ಥಳೀಯ ನಾಯಕರುಗಳು, ಸರ್ವೇ ಮಾಡಲು ಯಾರೂ ನಮ್ಮನ್ನು ಸಂಪರ್ಕಿಸಲಿಲ್ಲ ಎನ್ನುವ ನೋವನ್ನು ತೋಡಿಕೊಂಡಿದ್ದರು. ಹಾಗಾಗಿ, ಈ ಸಮೀಕ್ಷೆ, ಹಲವು ಕಾಂಗ್ರೆಸ್ ನಾಯಕರಿಗೆ ಬಿಸುತುಪ್ಪವಾಗಿ ಪರಿಣಮಿಸಿತ್ತು. ಡಿಸಿಎಂ ಡಿ.ಕೆ ಶಿವಕುಮಾರ್, ಮರುಗಣತಿಯ ಅಸಲಿ ಕಾರಣವನ್ನೂ ವಿವರಿಸಿದ್ದರು.
ತಮ್ಮ ಸಮುದಾಯದವರ ಅಸಮಾಧಾನವನ್ನು ವ್ಯಕ್ತಪಡಿಸಿದರೆ, ಇನ್ನೊಂದು ಸಮಾಜದ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎನ್ನುವ ಕಾರಣಕ್ಕಾಗಿ, ಎಷ್ಟೋ ಕಾಂಗ್ರೆಸ್ ನಾಯಕರು, ರಾಜ್ಯದಲ್ಲಿ ಈ ಬಗ್ಗೆ ಚಕಾರ ಎತ್ತಲು ಹೋಗಿರಲಿಲ್ಲ. ಬದಲಿಗೆ, ನೇರವಾಗಿ ಹೈಕಮಾಂಡ್ ಗಮನಕ್ಕೆ ತಂದಿದ್ದರು. ಒಟ್ಟಿನಲ್ಲಿ, ಹೆಚ್ಚಿನ ಕಾಂಗ್ರೆಸ್ ನಾಯಕರು ಬಯಸಿದ್ದು ಹೈಕಮಾಂಡ್ ಮೂಲಕ ನೆರವೇರಿದೆ.
ವೈದ್ಯ ಹೇಳಿದ್ದು ಹಾಲು ಅನ್ನ, ರೋಗಿ ಬಯಸಿದ್ದು ಹಾಲು ಅನ್ನ ಎನ್ನುವ ಹಾಗೇ, ಹೆಚ್ಚಿನ ಕಾಂಗ್ರೆಸ್ ನಾಯಕರಿಗೆ, ಮರು ಜಾತಿಗಣತಿಯ ನಿರ್ಧಾರ ಖುಷಿಯನ್ನಂತೂ ಕೊಟ್ಟಿದೆ. ಇದು ನನ್ನ ನಿರ್ಧಾರವಲ್ಲ, ಹೈಕಮಾಂಡ್ ನಿರ್ಧಾರವೆಂದು ಸಿಎಂ ಸಿದ್ದರಾಮಯ್ಯ ಬಹಿರಂಗವಾಗಿಯೇ ಹೇಳಿಕೆಯನ್ನು ನೀಡಿದ್ದಾರೆ.