Uncategorized

ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ವಿಮಾನ ಪತನ

ಅಹಮದಾಬಾದ್:- ಗುಜರಾತ್ ನ ಅಹಮದಾಬಾದ್ ನಲ್ಲಿ ಒಟ್ಟು 242 ಮಂದಿ ಜನರಿದ್ದ ಏರ್ ಇಂಡಿಯಾ (Air India) ವಿಮಾನ ಗುರುವಾರ (ಜೂ.12) ಮಧ್ಯಾಹ್ನ ಪತನವಾಗಿದೆ.

ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ನ ಗ್ಯಾಟ್ರಿಕ್ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 1:10 ಕ್ಕೆ ಹೊರಟಿದ್ದ ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನವಾಗಿದೆ.

ಪತನದ ಪ್ರದೇಶದದಲ್ಲಿ ದಟ್ಟವಾದ ಕಪ್ಪು ಹೊಗೆ ಆವರಿಸಿದ್ದು, ಏಳು ಅಗ್ನಿಶಾಮಕ ವಾಹನಗಳು ಸೇರಿದಂತೆ ತುರ್ತು ಸೇವೆಗಳು ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಸಾವು ನೋವುಗಳ ಬಗ್ಗೆ ಈ ಕ್ಷಣದವರೆಗೂ ಯಾವುದೇ ವರದಿಯಾಗಿಲ್ಲ. ಪ್ರಾಥಮಿಕ ಮಾಹಿತಿ ಪ್ರಕಾರ ವಿಮಾನದಲ್ಲಿ ಗುಜರಾತಿನ ಮಾಜಿ ಸಿಎಂ ವಿಜಯ್ ರೂಪಾನಿ ಇದ್ದರು ಎಂದು ಹೇಳಲಾಗುತ್ತಿದೆ.

ಆನ್‌ಲೈನ್ ಫ್ಲೈಟ್ ಟ್ರ್ಯಾಕರ್‌ನಲ್ಲಿ ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ನ ಗ್ಯಾಟ್ವಿಕ್ ವಿಮಾನ ನಿಲ್ದಾಣದ ಕಡೆಗೆ ಮಧ್ಯಾಹ್ನ 1.17ಕ್ಕೆ ಟೇಕಾಫ್ ಆಯಿತು. ಎಂದಿನಂತೆ ವಿಮಾನ 1.10ಕ್ಕೆ ಹೊರಡಬೇಕಿತ್ತು. ಆದರೆ, 7 ನಿಮಿಷ ತಡವಾಗಿ ಟೇಕಾಫ್ ಆಗಿದೆ. ಇದಾದ 5 ನಿಮಿಷದಲ್ಲಿ 825 ಅಡಿ ಎತ್ತರದಿಂದ ವಿಮಾನ ಪತನಗೊಂಡಿದೆ ಎಂದು ವರದಿಯಾಗಿದೆ.

ವಿಮಾನವು ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರ ನೇತೃತ್ವದಲ್ಲಿ ಪ್ರಥಮ ಅಧಿಕಾರಿ ಕ್ಲೈವ್ ಕುಂದರ್ ಅವರ ನೇತೃತ್ವದಲ್ಲಿ ಪ್ರಯಾಣ ಬೆಳೆಸಿತ್ತು. ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರಿಗೆ 8200 ಗಂಟೆಗಳ ಹಾರಾಟದ ಅನುಭವ ಹೊಂದಿದ್ದರು. ಸಹ ಪೈಲಟ್‌ಗೆ 1100 ಗಂಟೆಗಳ ಹಾರಾಟದ ಅನುಭವವಿತ್ತು.

ವಿಮಾನ ಪತನದ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಗುಜರಾತ್ ಮುಖ್ಯಮಂತ್ರಿ, ಗೃಹ ಸಚಿವರು ಮತ್ತು ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿದ್ದಾರೆ. ಕೇಂದ್ರ ಸರ್ಕಾರದ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

ಅಹಮದಾಬಾದ್-ಲಂಡನ್ ಗ್ಯಾಟ್ವಿಕ್ ವಿಮಾನ AI171 ಇಂದು (ಜೂನ್ 12) ಒಂದು ದುರಂತದಲ್ಲಿ ಸಿಲುಕಿದೆ. ಈ ಕ್ಷಣದಲ್ಲಿ, ನಾವು ವಿವರಗಳನ್ನು ಖಚಿತಪಡಿಸಿಕೊಳ್ಳುತ್ತಿದ್ದೇವೆ ಮತ್ತು ಹೆಚ್ಚಿನ ಅಪ್ಡೇಟ್ಗಳನ್ನು ಆದಷ್ಟು ಬೇಗ ಹಂಚಿಕೊಳ್ಳುತ್ತೇವೆ ಎಂದು ಏರ್ ಇಂಡಿಯಾ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅಹಮದಾಬಾದ್‌ನಲ್ಲಿ ನಡೆದ ವಿಮಾನ ಅಪಘಾತದ ಬಗ್ಗೆ ತಿಳಿದು ಆಘಾತವಾಯಿತು. ನಾನು ವೈಯಕ್ತಿಕವಾಗಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇನೆ ಮತ್ತು ಎಲ್ಲಾ ವಾಯುಯಾನ ಮತ್ತು ತುರ್ತು ಪ್ರತಿಕ್ರಿಯೆ ಸಂಸ್ಥೆಗಳಿಗೆ ತ್ವರಿತ ಮತ್ತು ಸಂಘಟಿತ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ್ದೇನೆ. ರಕ್ಷಣಾ ತಂಡಗಳನ್ನು ಸಜ್ಜುಗೊಳಿಸಲಾಗಿದೆ ಮತ್ತು ವೈದ್ಯಕೀಯ ನೆರವು ಮತ್ತು ಪರಿಹಾರ ನೆರವನ್ನು ಸ್ಥಳಕ್ಕೆ ತಲುಪಿಸಲಾಗುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಪು ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು, ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದ ಘಟನೆಯನ್ನು ಪರಿಶೀಲಿಸಿದ್ದಾರೆ. ಸ್ಥಳದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳ ಮೇಲ್ವಿಚಾರಣೆಗಾಗಿ ತಾವು ಅಹಮದಾಬಾದ್‌ಗೆ ಧಾವಿಸುತ್ತಿರುವುದಾಗಿ ಸಚಿವರು, ಪ್ರಧಾನಿಗೆ ತಿಳಿಸಿದರು. ಅಗತ್ಯವಿರುವ ಎಲ್ಲಾ ಬೆಂಬಲವನ್ನು ತಕ್ಷಣವೇ ನೀಡಲಾಗುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಪ್ರಧಾನಿಯವರು ಸಚಿವರಿಗೆ ನಿರ್ದೇಶನ ನೀಡಿದ್ದಾರೆ ಮತ್ತು ಪರಿಸ್ಥಿತಿಯ ಬಗ್ಗೆ ನಿಯಮಿತವಾಗಿ ಮಾಹಿತಿ ನೀಡಬೇಕೆಂದು ತಿಳಿಸಿದ್ದಾರೆ.