ಚಿಕ್ಕಮಗಳೂರು:- ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗಲು ಹೆಚ್ಚು ಶಾಸಕರ ಬೆಂಬಲವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಬಹಿರಂಗವಾಗಿ ಹೇಳಿಕೆ ನೀಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಸಿ.ಟಿ ರವಿ ಪ್ರತಿಕ್ರಿಯಿಸಿದ್ದು ಡಿಕೆಶಿಯವರನ್ನು ಪರೋಕ್ಷವಾಗಿ ಕುಟುಕಿದ್ದಾರೆ.
ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಹೆಚ್ಚು ಶಾಸಕರ ಬೆಂಬಲ ಇಲ್ಲ ಎಂದು ಮಾಧ್ಯಮಗಳ ಮುಂದೆ ನೇರವಾಗಿ ಹೇಳುವ ಮೂಲಕ ಡಿಸಿಎಂಗೆ ಅವಮಾನ ಮಾಡಿದ್ದಾರೆ. ಈ ಅಪಮಾವನನ್ನು ಡಿಕೆಶಿ ಅದ್ಯಾವ ರೀತಿ ಸಹಿಸಿಕೊಳ್ಳುತ್ತಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ರಾಜ್ಯದಲ್ಲಿ 2023 ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 136 ಶಾಸಕರು ಆಯ್ಕೆಯಾಗಿದ್ದೇ ಡಿ.ಕೆ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ. ಆದರೆ, ಸಿದ್ದರಾಮಯ್ಯ ನೋಡಿದರೆ ಡಿಕೆಗೆ ಶಾಸಕರ ಬೆಂಬಲವೇ ಇಲ್ಲ ಎನ್ನುತ್ತಾರೆ. ಇದು ಶಾಲು ಸುತ್ತಿ ಹೊಡೆದ ಹಾಗಲ್ವ, ಹಾಗೇ ನೇರಾನೇರ ಹೊಡೆದ ಹಾಗೆ ಎಂದು ಡಿ.ಕೆ ಶಿವಕುಮಾರ್ ರನ್ನು ಟೀಕಿಸಿದ್ದಾರೆ.
ಇತ್ತೀಚೆಗೆ ನಾಯಕತ್ವ ಬದಲಾವಣೆಯ ಚರ್ಚೆ ಗರಿಗೆದರಿದ್ದ ಬೆನ್ನಲ್ಲೇ ಸಿಎಂ ಹಾಗೂ ಡಿಸಿಎಂ ದೆಹಲಿಗೆ ತೆರಳಿ ವರಿಷ್ಠರ ಭೇಟಿಗೆ ಮುಂದಾಗಿದ್ದರು. ಈ ವೇಳೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಡಿ.ಕೆ ಶಿವಕುಮಾರ್ ಸಿಎಂ ಆಗಲು ಅವರಿಗೆ ಶಾಸಕರ ಬೆಂಬಲವಿಲ್ಲ ಎಂದು ಹೇಳಿದ್ದರು.