ಬೆಂಗಳೂರು

ಡಿಕೆಶಿ ಅವರಿಗೆ ಆತುರವೂ ಇಲ್ಲ, ಆತಂಕವೂ ಇಲ್ಲ.- ಡಿ.ಕೆ.ಸುರೇಶ್

ಬೆಂಗಳೂರು:- ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಶಾಸಕರ ಬೆಂಬಲವಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಂಸದರೂ ಆಗಿರುವ ಬಮೂಲ್‌ ಅಧ್ಯಕ್ಷ ಡಿ.ಕೆ.ಸುರೇಶ್‌ ತಿರುಗೇಟು ನೀಡಿ, ಡಿ.ಕೆ.ಶಿವಕುಮಾರ್ ಬಲಾಬಲ ಪ್ರದರ್ಶನ ಮಾಡುವ ವ್ಯಕ್ತಿತ್ವ ಹೊಂದಿಲ್ಲ, ಹೈಕಮಾಂಡ್‌ಗೆ ಗೌರವ ಕೊಡುವ ವ್ಯಕ್ತಿ ಎಂದು ಹೇಳುವ ಮೂಲಕ ಟಾಂಗ್ ನೀಡಿದ್ದಾರೆ.

ಡಿಕೆಶಿ ಅವರಿಗೆ ಆತುರವೂ ಇಲ್ಲ, ಆತಂಕವೂ ಇಲ್ಲ. ಸದ್ಯ ಸಿಎಂ ಸ್ಥಾನ ಖಾಲಿ ಇಲ್ಲ, ಪದೇ ಪದೆ ಈ ವಿಚಾರ ಯಾಕೆ ಚರ್ಚೆಯಾಗುತ್ತಿದೆ ಗೊತ್ತಿಲ್ಲ, ಈ ಕುರಿತು ಸಿಎಂ ಸಿದ್ದರಾಮಯ್ಯ ಅವರನ್ನೇ ಕೇಳಬೇಕು ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರು ಪಕ್ಷದ ಪ್ರಾಮಾಣಿಕ ಕಾರ್ಯಕರ್ತ, ಶಾಸಕರ ಬಲಾಬಲ ಪ್ರದರ್ಶಿಸುವ ವ್ಯಕ್ತಿತ್ವ ಅವರದ್ದಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಜಗಳವಿಲ್ಲ. ಕಾಂಗ್ರೆಸ್ ಪಕ್ಷದ ವರಿಷ್ಠರು, ಮುಖ್ಯಮಂತ್ರಿಗಳು, ಅಧ್ಯಕ್ಷರು ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಈಗಾಗಲೇ ಈ ವಿಚಾರವಾಗಿ ಸ್ಪಷ್ಟನೆ ನೀಡಿದ್ದಾರೆ. ಸಿಎಂ ಅವರ ನಾಯಕತ್ವದಲ್ಲೇ ಎಲ್ಲರೂ ಮುಂದುವರಿಯಲಿದ್ದಾರೆ ಎಂದು ತಿಳಿಸಿದ್ದಾರೆ.

ಸಿಎಂ ಬದಲಾವಣೆ ಕುರಿತು ಕಾಂಗ್ರೆಸ್‌ ನಾಯಕರಲ್ಲಿ ಯಾವುದೇ ಗೊಂದಲಗಳಿಲ್ಲ. ಆದರೆ, ಮಾಧ್ಯಮಗಳಲ್ಲಿ ಮಾತ್ರ ಗೊಂದಲವಿದೆ. ಡಿ.ಕೆ.ಶಿವಕುಮಾರ್ ಅವರು ಪಕ್ಷ ಕೊಟ್ಟಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಪಕ್ಷದ ಕಾರ್ಯಕರ್ತನಾಗಿ ಮುನ್ನಡೆಸುತ್ತಿದ್ದಾರೆ. ಪಕ್ಷದ ಸೂಚನೆಯಂತೆ ಅವರು ಕೆಲಸ ಮಾಡುತ್ತಿದ್ದಾರೆ. ಇದರ ಹೊರತಾಗಿ ಹೆಚ್ಚಿನ ವಿಚಾರ ಏನೂ ಇಲ್ಲ ಎಂದು ಡಿ.ಕೆ.ಸುರೇಶ್‌ ಹೇಳಿದ್ದಾರೆ.