ಮಂಡ್ಯ

ಡಿಕೆಶಿ ಪರ ಹಿಂದೂಪರ ಸಂಘಟನೆ

ಮಂಡ್ಯ:- ಕಾವೇರಿ ಆರತಿ ಯೋಜನೆಗೆ ಸಂಬಂಧಿಸಿದಂತೆ ಪರ-ವಿರೋಧ‌ ತಾರಕಕ್ಕೇರಿದೆ. ಮೊದಲಿನಿಂದಲೂ ಕಾವೇರಿ ಆರತಿಗೆ ರೈತ ಸಂಘಟನೆಗಳು‌ ಮತ್ತು ಪ್ರಗತಿಪರರು ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಬಿಜೆಪಿ ಸೇರಿದಂತೆ ಕೆಲ ರಾಜಕೀಯ ನಾಯಕರು ಕೂಡ ಇದಕ್ಕೆ ವಿರೋಧಿಸಿದ್ದು, ರೈತರ ಪರವಾಗಿ ನಿಂತಿದ್ದಾರೆ. ಹೀಗಿರುವಾಗ ಅಚ್ಚರಿ ಎಂಬಂತೆ ಹಿಂದೂ ಸಂಘಟನೆಗಳು ಮತ್ತು ಮುಖಂಡರು ಯೋಜನೆ ಪರ ನಿಂತ್ತಿದ್ದು, ಈ ಯೋಜನೆ ಕೈ ಬಿಟ್ಟರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಹಿಂದೂಪರ ಸಂಘಟನೆಗಳ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಮಂಜುನಾಥ್ ಯೋಜನೆ ರೂಪಿಸಿದ ಡಿ.ಕೆ ಶಿವಕುಮಾರ್ ಹಾಗೂ ಚಲುವರಾಯಸ್ವಾಮಿಗೆ ಅಭಿನಂದನೆ. ಕಾವೇರಿ ಆರತಿಗಾಗಿ ಕಾಂಗ್ರೆಸ್‌ ಸರ್ಕಾರದ ಪರ ನಾವು ನಿಲ್ಲುತ್ತೇವೆ. ಗಂಗಾ ಆರತಿಗಿಂತ ವಿಭಿನ್ನವಾಗಿ ಕಾವೇರಿ ಆರತಿ ಮಾಡಿ ಎಂದಿದ್ದಾರೆ. ಕೆಲವು ಸೋಗಲಾಡಿ, ಸ್ವಾರ್ಥ ಪ್ರಗತಿಪರರ ಹೋರಾಟಕ್ಕೆ ಸರ್ಕಾರ ಮಣಿಯಬಾರದು. ಕಾವೇರಿ ಆರತಿ ನಮ್ಮ ಸಂಸ್ಕೃತಿಯ ಪ್ರತೀಕ, ಪರಂಪರೆಗೆ ಪ್ರೋತ್ಸಾಹ. ಸ್ಥಳೀಯ ಪ್ರದೇಶಗಳ ಅಭಿವೃದ್ಧಿ, ಆರ್ಥಿಕತೆ ವೃದ್ಧಿ, ಹೆಚ್ಚು ಉದ್ಯೋಗ ಸೃಷ್ಟಿ ಆಗಲಿದೆ. 100 ಕೋಟಿಯಲ್ಲ 200 ಕೋಟಿ ರೂಪಾಯಿ ಆದರೂ ಮಾಡಿ. ವಿರೋಧಕ್ಕೆ ಕ್ಯಾರೆ ಅನ್ನದೇ ಕಾವೇರಿ ಆರತಿ ಮಾಡಲೇಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನು ಈ ಬಗ್ಗೆ ಇತ್ತೀಚೆಗೆ ಮಾಜಿ ಸಂಸದೆ ಸುಮಲತಾ ಅಂಬರೀಶ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು. ಕೆಆರ್ಎಸ್ ಬಳಿ ಕಾವೇರಿ ಆರತಿ ಮತ್ತು ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಿಸುವುದನ್ನು ಮಂಡ್ಯದ ಜನತೆ ಹಾಗೂ ರೈತ ಸಂಘಗಳು ವಿರೋಧಿಸಿದ ಹೊರತಾಗಿಯೂ ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯದಿರುವುದು ಖಂಡನೀಯ ಎಂದು ಹೇಳಿದ್ದರು.