ಬೆಂಗಳೂರು:- ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿರುವ ಭಾರತದ ಸಂವಿಧಾನ ಸದ್ಯ ರಾಜಕೀಯ ನಾಯಕರ ಕಿತ್ತಾಟಕ್ಕೆ ಬಳಕೆಯಾಗುತ್ತಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳ ನಾಯಕರು ವಾದ ಪ್ರತಿವಾದದಲ್ಲಿ ಮುಳುಗಿದ್ದಾರೆ.
ಆರ್‌ಎಸ್‌ಎಸ್‌ನ ಪ್ರಧಾನ ಕಾರ್ಯದರ್ಶಿ ದತ್ತಾತ್ತೇಯ ಹೊಸಬಾಳೆ ಅವರು ಇತ್ತೀಚೆಗಷ್ಟೆ ಸಂವಿಧಾನದ ಕುರಿತು ನೀಡಿದ ತಿದ್ದುಪಡಿಯ ಹೇಳಿಕೆ ಸದ್ಯ ವಿವಾದವನ್ನು ಎಬ್ಬಿಸಿದ್ದು, ಕಾಂಗ್ರೆಸ್ ನಾಯಕರು ಈ ಹೇಳಿಕೆ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಸಂವಿಧಾನದ ಪ್ರಸ್ತಾವನೆಯಲ್ಲಿರುವ ಸಮಾಜವಾದ ಹಾಗೂ ಜಾತ್ಯಾತೀತ ಈ ಎರಡೂ ಪದಗಳು ಅಂಬೇಡ್ಕರ್ ರಚಿಸಿದ್ದ ಸಂವಿಧಾನದಲ್ಲಿರಲಿಲ್ಲ, ಬಳಿಕ ಕಾಂಗ್ರೆಸ್ ಸೇರಿಸಿದ್ದು, ಆ ಎರಡು ಪದಗಳನ್ನು ತೆಗೆದುಹಾಕಬೇಕು ಎಂದಿದ್ದರು.
ಈ ಹೇಳಿಕೆ ಕುರಿತು ಸದ್ಯ ಅಶ್ವಥ್ ನಾರಾಯಣ್ ಪ್ರತಿಕ್ರಿಯಿಸಿದ್ದು, ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆ ಸರಿ ಇದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಅಂಬೇಡ್ಕರ್ ಅವರು ಸಂವಿಧಾನ ರಚಿಸುವ ಮುನ್ನ ಆ ಕಾಲಕ್ಕೆ ಇದ್ದ ಇತರೆ ದೇಶಗಳ ಸಂವಿಧಾನವನ್ನು ಓದಿ ಬಳಿಕ ದೇಶದ ಸಂಸ್ಕೃತಿ ಹಾಗೂ ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಹಗಲು ಇರುಳು ಶ್ರಮಿಸಿದರು. ಆದರೆ, ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನ್ಯಾಯಾಂಗದ ಸಂಪೂರ್ಣ ಅಧಿಕಾರವನ್ನು ಮೊಟಕುಗೊಳಿಸಿ, ಪತ್ರಕರ್ತರ ಅಧಿಕಾರವನ್ನು ಮೊಟಕುಗೊಳಿಸಿ, ಸಾರ್ವಜನಿಕರ ಮೂಲಭೂತ ಹಕ್ಕನ್ನು ಮೊಟಕುಗೊಳಿಸಿ, ಆ ಸಂದರ್ಭದಲ್ಲಿ ಇಂದಿರಾ ಗಾಂಧಿಯವರ ಆಲೋಚನೆಯನ್ನು ತಂದು ಹಾಕಿದ್ದಾರೆ ಎಂದು ಆರೋಪಿಸಿದರಲ್ಲದೆ ಜಾಗತೀಕರಣ, ಖಾಸಗೀಕರಣ ತಂದವರು ಇದೇ ಕಾಂಗ್ರೆಸ್‌ನವರು. ಹೀಗಾಗಿ ದತ್ತಾತ್ರೇಯ ಹೊಸಬಾಳೆ ಅವರು ಕಾಂಗ್ರೆಸ್ ಮಾಡಿರುವ ತಪ್ಪನ್ನು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಜಾತ್ಯಾತೀತ ಹಾಗೂ ಸಮಾಜವಾದ ಎನ್ನುವುದು ಅಂಬೇಡ್ಕರ್ ಕೊಟ್ಟಿದ್ದಲ್ಲ, ಇಂದಿರಾ ಗಾಂಧಿ ಅವರ ಕೊಡುಗೆ, ಅಂಬೇಡ್ಕರ್ ಏನು ಕೊಟ್ಟಿಲ್ಲ ಅದು ನಮಗೆ ಬೇಕಾಗಿಲ್ಲ ಎಂದು ಹೇಳಿದರು.