ಬೆಂಗಳೂರು

ದುಡಿಯುವ ವರ್ಗ ಯಾವತ್ತಿಗೂ ದುಡಿಯುತ್ತಲೇ ಇರಲಿ ಎಂಬ ಅಭಿಪ್ರಾಯ ಯಾರಿಗೂ ಇರಬಾರದು.- ಸವದಿ

ಬೆಂಗಳೂರು:- ರಾಜ್ಯ ಸರ್ಕಾರ ಬಿಟ್ಟಿ ಯೋಜನೆಗಳಿಂದ ಜನ ಸೋಮಾರಿಗಳಾಗುತ್ತಿದ್ದಾರೆ ಎಂಬ ರಂಭಾಪುರಿ ಶ್ರೀಗಳ ಹೇಳಿಕೆಯನ್ನು ಖಂಡಿಸಿ ಲಕ್ಷ್ಮಣ ಸವದಿಯವರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಶ್ರೀಗಳ ಬಗ್ಗೆ ನಮಗೆ ಅಗಾಧ ಗೌರವವಿದೆ, ಯಾವ ಅರ್ಥದಲ್ಲಿ ಅವರು ಆ ರೀತಿ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಆದರೆ, ನಾವು ಬಡವರ ಕಷ್ಟವನ್ನು ಅರ್ಥ ಮಾಡಿಕೊಳ್ಳಬೇಕು. ಅಭಿವೃದ್ಧಿ ಎಂದರೆ ಕಟ್ಟಡ, ರಸ್ತೆ ಚರಂಡಿ ಕಟ್ಟಡ ಒಂದು ಭಾಗವಷ್ಟೇ. ಬಡವರ ಹೊಟ್ಟೆ ತುಂಬಿಸುವುದು ನಿಜವಾದ ಅಭಿವೃದ್ಧಿ. ರೋಡ್​​ ಸರಿ ಇದ್ದು ಅನ್ನ ಇಲ್ಲದಿದ್ದರೆ ರಸ್ತೆಯನ್ನು ನೆಕ್ಕಲು ಆಗುತ್ತಾ ಎಂದು ಪ್ರಶ್ನಿಸಿದರು.

ದುಡಿಯುವ ವರ್ಗ ಯಾವತ್ತಿಗೂ ದುಡಿಯುತ್ತಲೇ ಇರಲಿ ಎಂಬ ಅಭಿಪ್ರಾಯ ಯಾರಿಗೂ ಇರಬಾರದು. ಬಡವರಿಗಾಗಿ ನೀಡಿರುವ ಯೋಜನೆಗಳ ಬಗ್ಗೆ ಅನಗತ್ಯವಾಗಿ ಯಾರೂ ಮಾತನಾಡಬಾರದು. ಟೀಕಿಸಬಾರದು. ಬಡವರಿಗಾಗಿ ಯಾವುದೇ ಸರ್ಕಾರ ಯೋಜನೆಗಳನ್ನು ರೂಪಿಸಿದರೂ ಆ ಬಗ್ಗೆ ಬೆಂಬಲಿಸಬೇಕು ಹೊರತು ಟೀಕಿಸುತ್ತಾ ಚರ್ಚಿಸಬಾರದು ಎಂದರು.

ರಾಜ್ಯ ಸರ್ಕಾರಕ್ಕೆ ಒಂದೊಂದು ಉಚಿತ ಯೋಜನೆಗಳು ಎಂದರೆ ಆರ್ಥಿಕವಾಗಿ ಭಾರ ಆಗುವುದು ಸಾಮಾನ್ಯ. ಪಂಚ ಗ್ಯಾರಂಟಿಗಳನ್ನು ಬಡವರಿಗೆ, ಮಧ್ಯಮ ವರ್ಗಗಳ ಜನರಿಗೆ ನೀಡಲಾಗುತ್ತಿದೆ. ಅದನ್ನು ನಿಭಾಯಿಸುವ ಕೆಲಸವನ್ನು ನಾವು ಮಾಡಬೇಕಾಗುತ್ತದೆ. ಉಚಿತ ಯೋಜನೆಗಳಿಗೆ ಹಣ ನೀಡಿರುವುದರಿಂದ ಅಭಿವೃದ್ಧಿಯ ಕೊರತೆ ಆಗಿರಬಹುದು. ಸರ್ಕಾರಕ್ಕೆ ಹೊರೆಯಾದರೂ ಪರವಾಗಿಲ್ಲ, ನಮ್ಮ ಯೋಜನೆಗಳಿಂದ ಬಡವರಿಗೆ ಅನುಕೂಲವಾಗುತ್ತಿದೆ. ಅದನ್ನು ಸರ್ಕಾರ ನಿಭಾಯಿಸಲಿದೆ.

ನಾವೆಲ್ಲಾ ದೇಶ ಸುತ್ತಿದ್ದೇವೆ, ಬಡವರು ಎಷ್ಟೋ ಊರುಗಳನ್ನು ನೋಡಿಲ್ಲ. ತಮ್ಮ ಹಳ್ಳಿ ಬಿಟ್ಟು ಆಚೆ ಬಂದಿಲ್ಲ. ಅವರಿಗೆ ಸೌಲಭ್ಯಗಳನ್ನು ನೀಡಿರುವುದರಿಂದ ಬೇರೆ-ಬೇರೆ ಊರುಗಳನ್ನು ನೋಡುತ್ತಿದ್ದಾರೆ. ಹೀಗಾಗಿ ಸರ್ಕಾರಕ್ಕೆ ಹೊರೆ ಸಹಜ. ಆದರೆ, ಕೇಂದ್ರದಿಂದ ನಮಗೆ ಬರಬೇಕಾದ ಅನುದಾನ, ಜಿಎಸ್​​​ಟಿ ಪಾಲು ಇವೆಲ್ಲವೂ ಸರಿಯಾಗಿ ಬಂದರೆ ಎಲ್ಲವೂ ಸರಿದೂಗಿಸಬಹುದು. ಆದ್ದರಿಂದ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬಾರದು, ಮುಂದುವರಿಯಬೇಕು ಎಂದು ಸವದಿ ಪ್ರತಿಪಾದಿಸಿದ್ದಾರೆ.