Uncategorized

ದುಬೈಯ ಮರೀನಾದಲ್ಲಿ 67 ಮಹಡಿಗಳ ವಸತಿ ಗಗನಚುಂಬಿ ಕಟ್ಟಡದಲ್ಲಿ ಭಾರಿ ಬೆಂಕಿ

ದುಬೈ:- ಮರೀನಾದಲ್ಲಿ ಪಿನಾಕಲ್ ಎಂಬ 67 ಮಹಡಿಗಳ ವಸತಿ ಗಗನಚುಂಬಿ ಕಟ್ಟಡದಲ್ಲಿ ಶನಿವಾರದ ಬೆಳಗಿನ ಜಾವ ಸಂಭವಿಸಿದ ಭಾರಿ ಬೆಂಕಿ ಅನಾಹುತದಿಂದಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಆದರೆ, ನಾಗರಿಕ ರಕ್ಷಣಾ ಪಡೆ ಹಾಗೂ ತುರ್ತು ದಳಗಳ ತಕ್ಷಣದ ಪ್ರತಿಕ್ರಿಯೆಯಿಂದ 3,800ಕ್ಕೂ ಹೆಚ್ಚು ನಿವಾಸಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂಬುದು ಸಮಾಧಾನದ ವಿಷಯವಾಗಿದೆ.
ಬೆಳಗಿನ ಜಾವ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಹೊಗೆ ಗಗನವನ್ನೇ ಆವರಿಸಿಕೊಂಡಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ದುಬೈ ಅಗ್ನಿಶಾಮಕ ದಳ ಮತ್ತು ನಾಗರಿಕ ರಕ್ಷಣಾ ತಂಡಗಳು ಗಗನಚುಂಬಿ ಕಟ್ಟಡದ ಎಲ್ಲ ಅಪಾರ್ಟ್‌ಮೆಂಟ್‌ಗಳಲ್ಲಿ ತೀವ್ರ ಪರಿಶ್ರಮದಿಂದ ಕಾರ್ಯ ನಿರ್ವಹಿಸಿ 764 ಮನೆಗಳಲ್ಲಿ ವಾಸವಿದ್ದ ನಿವಾಸಿಗಳನ್ನು ಸುರಕ್ಷಿತವಾಗಿ ಹೊರಗೆ ಕರೆತಂದು ರಕ್ಷಿಸಿದರು. ಈ ಕಾರ್ಯಾಚರಣೆ ಆರು ಗಂಟೆಗಳ ಕಾಲ ನಿರಂತರವಾಗಿ ನಡೆದಿದ್ದು, ಬೆಂಕಿಯ ಚುರುಕನ್ನು ತಗ್ಗಿಸಲು ಸಾಕಷ್ಟು ಕಷ್ಟಪಟ್ಟು ಶ್ರಮಿಸಲಾಯಿತು.
ಸ್ಥಳಾಂತರಗೊಂಡವರಿಗೆ ತಾತ್ಕಾಲಿಕ ವಾಸಸ್ತಳ ಒದಗಿಸಲು ಅಧಿಕಾರಿಗಳು ಸಹಕಾರ ಮಾಡುತ್ತಿದ್ದಾರೆ. ಅವರ ಆರೋಗ್ಯ, ಸುರಕ್ಷತೆ ಮತ್ತು ಮೂಲಭೂತ ಅವಶ್ಯಕತೆಗಳ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಬೆಂಕಿಯ ಮೂಲ ಕಾರಣವನ್ನು ಸ್ಪಷ್ಟವಾಗಿ ತಿಳಿಯದಿದ್ದರೂ, ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿದುಬಂದಿದೆ.
ಈ ಗಗನಚುಂಬಿ ಕಟ್ಟಡದಲ್ಲಿ ಇದಕ್ಕೂ ಮುಂಚೆಯೇ, 2015ರಲ್ಲಿ ಸಹ ಬೆಂಕಿ ಸಂಭವಿಸಿದ್ದು, 47ನೇ ಮಹಡಿಯಲ್ಲಿ ಸಂಭವಿಸಿದ ಬೆಂಕಿ ಒಂದಷ್ಟು ಮೇಲ್ಮಹಡಿಗೆ ವ್ಯಾಪಿಸಿತ್ತು. ಅಲ್ಲದೆ, ಈ ಕಟ್ಟಡದ ಪಕ್ಕದಲ್ಲಿಯೇ ಇರುವ ‘ದಿ ಟಾರ್ಚ್’ ಎಂಬ ಇನ್ನೊಂದು ವಸತಿ ಕಟ್ಟಡವು ಸಹ 2015 ಮತ್ತು 2017 ರಲ್ಲಿ ಬೆಂಕಿಗೆ ಆಹುತಿಯಾಗಿತ್ತು.
ಅನಾಹುತದ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಲಾಗಿದ ವೀಡಿಯೊಗಳಲ್ಲಿ, ನಿವಾಸಿಗಳು ಹೊಗೆಯಿಂದ ತಪ್ಪಿಸಿಕೊಳ್ಳಲು ಮುಖ ಮುಚ್ಚಿಕೊಂಡು ಭೀತಿಯಿಂದ ಕಟ್ಟಡದ ಹೊರಗೆ ಓಡುವ ದೃಶ್ಯಗಳು ಕಂಡುಬಂದಿವೆ. ಮುಖ್ಯದ್ವಾರದ ಬಳಿಯಲ್ಲಿ ಜನಸಂದಣಿ ಹೆಚ್ಚಾದರೂ, ತುರ್ತು ಸಿಬ್ಬಂದಿಯ ಸಮಯೋಚಿತ ನಿರ್ವಹಣೆ ಅನಾಹುತವಿಲ್ಲದ ಸ್ಥಳಾಂತರಕ್ಕೆ ಕಾರಣವಾಯಿತು.