ಚಿಕ್ಕಮಗಳೂರು

ನಗರ ವಸತಿ ಯೋಜನೆಯಡಿ ಅನ್ಯಾಯ: ರಾಜ್ಯಪಾಲರಿಗೆ ಬಿಜೆಪಿ ಪತ್ರ

ಚಿಕ್ಕಮಗಳೂರು:- ನರಸಿಂಹರಾಜಪುರ ತಾಲ್ಲೂಕಿನ ಪಟ್ಟಣ ಪಂಚಾಯಿತಿಯಲ್ಲಿ ನಗರ ವಸತಿ ಯೋಜನೆಯಡಿ ಫಲಾನುಭವಿಗಳು ಸಲ್ಲಿಸಿದ ಅರ್ಜಿಯನ್ನು ಹಿಂದಿನ ಅವಧಿಯಲ್ಲಿ ಪಾರದರ್ಶಕವಾಗಿ

ಪರಿಶೀಲನೆ ಮಾಡಿ ಅಂತಿಮಗೊಳಿಸಲಾಗಿದ್ದು, ಈಗಿನ ಶೃಂಗೇರಿ ಕ್ಷೇತ್ರದ ಶಾಸಕರು ಹಾಗೂ ನರಸಿಂಹರಾಜಪುರ ಪ.ಪಂ ಅಡಿಯಲ್ಲಿ ಆಡಳಿತ ರೂಢ ಕಾಂಗ್ರೆಸ್‌ ಪಕ್ಷದ ಸದಸ್ಯರುಗಳು ತಮಗೆ ಮನ ಬಂದಂತೆ ಆಶ್ರಯ ಯೋಜನೆಯಡಿ ವಸತಿ ನಿವೇಶನ ಮತ್ತು ಮನೆಗಳನ್ನು ಹಂಚಲು ಸಿದ್ಧತೆ ಮಾಡಿಕೊಂಡಿದ್ದು, ಇದರಿಂದ ಅನೇಕ ವರ್ಷಗಳಿಂದ ನಗರದಲ್ಲಿ ಆಶ್ರಯ ಯೋಜನೆಯಡಿ ಮನೆ ಮತ್ತು ನಿವೇಶನಕ್ಕಾಗಿ ಕಾಯುತ್ತಿರುವ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗಿರುವುದನ್ನು ಬಿಜೆಪಿ ಪಕ್ಷವು ತೀವ್ರವಾಗಿ ಖಂಡಿಸುತ್ತದೆ ಎಂದು ಬಿಜೆಪಿ ನಗರ ಘಟಕ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

ಪಟ್ಟಣ ಪಂಚಾಯಿಯ ಮೂಲಕ ಗೌರವಾನ್ವಿತ ರಾಜ್ಯಪಾಲರಿಗೆ ಪತ್ರ ರವಾನಿಸಿದ ಬಿಜೆಪಿ ತಂಡವು ಪತ್ರದಲ್ಲಿ ಹಿಂದಿನ ಅವಧಿಯಲ್ಲಿ ತಯಾರಾಗಿರುವ ಅರ್ಹ ಫಲಾನುಭವಿಗಳಿಗೆ ನಿವೇಶನಗಳನ್ನು ಹಂಚಲು ಕ್ರಮ ಕೈಗೊಳ್ಳಬೇಕಾಗಿ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಬರೆಯಲಾಗಿದೆ.

ರವಾನೆಯ ಪತ್ರದಲ್ಲಿ ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಪ್ರತಿ ದಿನ ಭ್ರಷ್ಟಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಆಶ್ರಯ ಯೋಜನೆಯಡಿ ಹಣ ಕೊಟ್ಟವರಿಗೆ ಸೌಲಭ್ಯವನ್ನು ನೀಡುತ್ತಿದ್ದು, ಇದನ್ನು ಕಾಂಗ್ರೆಸ್ ಪಕ್ಷದ ಶಾಸಕರುಗಳೇ ಹೇಳಿಕೆ ನೀಡಿದ್ದಾರೆ.

ಗ್ಯಾರಂಟಿ ಯೋಜನೆಗಳಿಗೆ ಮತ್ತು ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಿಗೆ ಸಮರ್ಭಕವಾಗಿ ಹಣ ಕೊಡದೇ ಇರುವುದರಿಂದ ಇದರ ಫಲಾನುಭವಿಗಳು, ಪರದಾಡುವಂತಾಗಿದೆ, ಈ ಭ್ರಷ್ಟ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕೆಂದು ಬಿಜೆಪಿ ಆಗ್ರಹಿಸಿರುತ್ತದೆ.

ನರಸಿಂಹರಾಜಪುರ ಪಟ್ಟಣ ಪಂಚಾಯಿತಿಯಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವು ಯಾವುದೇ ಅಭಿವೃದ್ಧಿ

ಕಾರ್ಯಕ್ರಮಗಳನ್ನು ಮಾಡದೇ ಇದ್ದು, ಕಳೆದ 4 ವರ್ಷಗಳಿಂದ ಪಟ್ಟಣದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯದೇ ಇದ್ದು, ಹಿಂದಿನ ಪಟ್ಟಣ ಪಂಚಾಯಿತಿ ಅವಧಿಯಲ್ಲಿ ಕಟ್ಟಿಸಿರುವ ಬಸ್ ನಿಲ್ದಾಣಗಳಿಗೆ ಬೋರ್ಡ್ ಹಾಕಿದ್ದೇ ಇವರ ಪರಮ ಸಾಧನೆಯಾಗಿದೆ. ಚರಂಡಿ, ರಸ್ತೆಗಳು ಸ್ವಚ್ಛತೆ ಕಾಣದಾಗಿದೆ, ಗುತ್ತಿಗೆದಾರರಿಗೆ ಇನ್ನು ಸಹ ಕಾಮಗಾರಿ ನಡೆಸಿದ ಬಿಲ್ಲುಗಳನ್ನು ನೀಡದೇ ಇರುವುದರಿಂದ ಗುತ್ತಿಗೆದಾರರು ಸಂಕಷ್ಟದಲ್ಲಿ ಇರುವಂತಾಗಿದೆ.

ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ನೌಕರರಿಗೆ ಪ್ರತಿ ತಿಂಗಳು ಸಂಬಳ ಕೊಡದೇ ಸತಾಯಿಸಲಾಗುತ್ತಿದೆ, ಜನ ಸಾಮಾನ್ಯರ ಕೆಲಸಗಳನ್ನು ಮಾಡಿಕೊಡದೆ ಕಚೇರಿಗೆ ಅಲೆದಾಡುವಂತಾಗಿದೆ. ಸರ್ಕಾರದ ಆದೇಶವಿದ್ದರೂ ಪಟ್ಟಣ ವ್ಯಾಪ್ತಿಯಲ್ಲಿ ಸಾರ್ವಜನಿಕರ ಆಸ್ತಿಗಳಿಗೆ ಇ ಖಾತಾ ಮಾಡಿಕೊಡದೇ ವಿಳಂಬ ಮಾಡಲಾಗುತ್ತಿದೆ ಎಂದು ಪತ್ರದಲ್ಲಿ ಸಂಕ್ಷಿಪ್ತವಾಗಿ ಬರೆಯಲಾಗಿದೆ.

ಈ ಸಂದರ್ಭದಲ್ಲಿ ಪ.ಪ ಮಾಜಿ ಅಧ್ಯಕ್ಷರು ಹಾಗೂ ರಾಜ್ಯ ಬಿಜೆಪಿಯ ಬಿ.ಎಸ್ ಆಶೀಷ್ ಕುಮಾರ್ ಸೇರಿದಂತೆ ರೇಖಾ ಮಂಜುನಾಥ್ ಲಾಡ್, ಲಂಟುರವಿ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.