ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹೈಕೋರ್ಟ್ ದರ್ಶನ್ ಹಾಗೂ ಗ್ಯಾಂಗ್‌ಗೆ ಜಾಮೀನು ನೀಡಿದ್ದನ್ನು ಖಂಡಿಸಿ ಸುಪ್ರೀಂ ಕೋರ್ಟ್ ಅಸಮಾಧಾನ ಹೊರಹಾಕಿತ್ತು.
ಈ ಕುರಿತ ಸುದ್ದಿಯನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದ ರಮ್ಯಾ, ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಬರೆದುಕೊಂಡಿದ್ದರು. ಈ ಮೂಲಕ ಪರೋಕ್ಷವಾಗಿ ದರ್ಶನ್ ಜಾಮೀನು ರದ್ದಾಗಬೇಕೆಂದ ನಟಿ ರಮ್ಯಾ ವಿರುದ್ಧ ದರ್ಶನ್ ಅಭಿಮಾನಿಗಳು ತಮ್ಮ ನಾಲಿಗೆ ಹರಿಬಿಟ್ಟಿದ್ದರು.
ಕೆಟ್ಟ ಕಾಮೆಂಟ್ ಮಾಡಲಾರಂಭಿಸಿದರು, ಅಲ್ಲದೇ ರಮ್ಯಾಗೆ ನೇರವಾಗಿ ಅಶ್ಲೀಲ ಮೆಸೇಜ್‌ಗಳನ್ನು ಮಾಡಲಾರಂಭಿಸಿದರು. ಇದರಿಂದ ಕೋಪಗೊಂಡ ರಮ್ಯಾ ಆ ಎಲ್ಲಾ ಮೆಸೇಜ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡರು. ಬಳಿಕ ಮಹಿಳಾ ಆಯೋಗ ಪೊಲೀಸ್ ಆಯುಕ್ತರಿಗೆ ದೂರನ್ನು ನೀಡಿದರು. ಅಲ್ಲದೇ ಸ್ವತಃ ರಮ್ಯಾ ಸಹ ದೂರು ನೀಡಿದರು.
ದೂರು ನೀಡಿದ ಬಳಿಕ ಮಾತನಾಡಿದ ರಮ್ಯಾ ಓರ್ವ ನಟಿಯಾಗಿ ಟ್ರೋಲ್ ಸಾಮಾನ್ಯ, ಆದರೆ ಇಷ್ಟು ಕೆಟ್ಟ ಟ್ರೋಲ್ ನಾನೆಂದೂ ನೋಡಿಲ್ಲ. ಹೀಗಾಗಿ ದೂರನ್ನು ದಾಖಲಿಸಿದೆ ಎಂದರು. ಅಲ್ಲದೇ ಎಷ್ಟು ಮಟ್ಟಕ್ಕೆ ಕೆಟ್ಟ ಪದ ಬಳಸಿದ್ದಾರೆ ಎಂದರೆ ಅವುಗಳನ್ನು ಜೀವಮಾನದಲ್ಲೇ ಕೇಳಿಲ್ಲ ಎಂದು ರಮ್ಯಾ ದರ್ಶನ್ ಅಭಿಮಾನಿಗಳ ವಿಕೃತ ಮನಸ್ಸನ್ನು ಬಿಚ್ಚಿಟ್ಟರು.
ಇದು ಕೇವಲ ಈಗಿನದ್ದು ಮಾತ್ರವಲ್ಲ, ಎರಡು ವರ್ಷಗಳ ಹಿಂದೆಯೇ ಇದರ ಬಗ್ಗೆ ನೋಡಿದ್ದೆ. ಯಶ್ ಹಾಗೂ ಸುದೀಪ್ ಹೆಂಡತಿ ಮಕ್ಕಳನ್ನೂ ಬಿಡದೇ ಕೆಟ್ಟದಾಗಿ ಟ್ರೋಲ್ ಮಾಡಿದ್ದರು. ಅದು ತುಂಬಾ ಬೇಜಾರನ್ನುಂಟುಮಾಡಿತ್ತು ಎಂದು ರಮ್ಯಾ ತಿಳಿಸಿದರು. ಇನ್ನು ದರ್ಶನ್ ರೇಣುಕಾಸ್ವಾಮಿ ವಿಚಾರದಲ್ಲಿ ತಪ್ಪು ಮಾಡಿದರು, ಅದೇ ರೀತಿ ನನ್ನ ವಿಷಯದಲ್ಲೂ ಏನೂ ಮಾತನಾಡದೇ ಸುಮ್ಮನಿದ್ದು ತಪ್ಪು ಮಾಡುತ್ತಿದ್ದಾರೆ. ಅಭಿಮಾನಿಗಳಿಗೆ ಬುದ್ದಿ ಹೇಳುವ ಕೆಲಸವನ್ನಾದರೂ ಮಾಡಬೇಕು ಎಂದರು.
Leave feedback about this